'ಆಪರೇಶನ್ ಸಿಂಧೂರ' ಮಾಹಿತಿ ಜಗತ್ತಿನ ಮುಂದಿಟ್ಟ ಕರ್ನಲ್ ಸೋಫಿಯಾ ಖುರೇಶಿ ಬೆಳಗಾವಿಯ ಸೊಸೆ!
ಕರ್ನಲ್ ಸೋಫಿಯಾ ಖುರೇಶಿ ಮತ್ತು ಕರ್ನಲ್ ತಾಜುದ್ದೀನ್ ಬಾಗೇವಾಡಿ ದಂಪತಿ
ಬೆಳಗಾವಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಎರಡು ವಾರಗಳ ಹಿಂದೆ ನಡೆದ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸಿದ ಯಶಸ್ವಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಮಾಹಿತಿ ಜಗತ್ತಿಗೆ ತೆರೆದಿಟ್ಟ ಕರ್ನಲ್ ಸೋಫಿಯಾ ಖುರೇಶಿ ಅವರು ಬೆಳಗಾವಿಯ ಸೊಸೆಯಾಗಿದ್ದಾರೆ.
ಕರ್ನಲ್ ಸೋಫಿಯಾ ಖುರೇಶಿ
ಭಾರತೀಯ ಸೇನೆಯ ಕಾರ್ಪ್ಸ್ ಆಫ್ ಸಿಗ್ನಲ್ಸ್ ನ ಅತ್ಯಂತ ಗೌರವಾನ್ವಿತ ಅಧಿಕಾರಿಣಿಯಾಗಿರುವ ಕರ್ನಲ್ ಸೋಫಿಯಾ ಖುರೇಶಿ ಬೆಳಗಾವಿಯ ಸೊಸೆ ಎಂಬುದು ಕನ್ನಡಿಗರ ಹೆಮ್ಮೆಯಾಗಿದೆ.
ಸೋಫಿಯಾ ಖುರೇಶಿಯವರ ಪತಿ ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದವರು. ಅವರು ಯಾಂತ್ರೀಕೃತ ಪದಾತಿ ದಳದಲ್ಲಿ ಅಧಿಕಾರಿಯಾಗಿದ್ದಾರೆ.
ತಾಜುದ್ದೀನ್ ಮತ್ತು ಸೋಫಿಯಾ ಅವರದ್ದು ಪ್ರೇಮ ವಿವಾಹ. 2015ರಲ್ಲಿ ಇವರು ವಿವಾಹಿತರಾಗಿದ್ದಾರೆ. ಪತಿ, ಪತ್ನಿ ಇಬ್ಬರೂ ಭಾರತೀಯ ಸೇನೆಯಲ್ಲಿ ಕರ್ನಲ್ ಆಗಿದ್ದಾರೆ.
ಕರ್ನಲ್ ಸೋಫಿಯಾ ಖುರೇಶಿ ಗುಜರಾತ್ ರಾಜ್ಯದ ಬರೋಡಾದವರು. ಇವರು ಬಲವಾದ ಮಿಲಿಟರಿ ಹಿನ್ನೆಲೆಯನ್ನು ಹೊಂದಿದ್ದಾರೆ. 2016ರಲ್ಲಿ ಮಿಲಿಟರಿ ಸಮರಾಭ್ಯಾಸದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿ ಇತಿಹಾಸವನ್ನು ಸೃಷ್ಟಿಸಿದ್ದರು.
ಜೀವರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೋಫಿಯಾ ಖುರೇಶಿ, 1999ರಲ್ಲಿ ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡಮಿಯಿಂದ ಲೆಫ್ಟಿನಂಟ್ ಆಗಿ ಸೇನೆಗೆ ಸೇರ್ಪಡೆಗೊಂಡಿದ್ದರು.
ಬುಧವಾರ ಮುಂಜಾನೆ ಭಾರತೀಯ ಸೇನಾಪಡೆ 'ಆಪರೇಶನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿನ ಉಗ್ರಗಾಮಿಗಳ ಎಷ್ಟು ನೆಲೆಗಳನ್ನು ಹೇಗೆ ಧ್ಚಂಸಗೊಳಿಸಿದೆ? ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಉದ್ದೇಶ ಏನು, ಎಷ್ಟರ ಮಟ್ಟಿಗೆ ಅದು ಯಶಸ್ಸು ಸಾಧಿಸಿದೆ ಎಂಬುದರ ವಿವರವನ್ನು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜೊತೆ ಕರ್ನಲ್ ಸೋಫಿಯಾ ಖುರೇಶಿ ನೀಡಿದ್ದರು.
ಸದ್ಯ ಸೋಫೀಯಾ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದರೆ, ಪತಿ ತಾಜುದ್ದೀನಿ ಬಾಗೇವಾಡಿ ಜಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.