×
Ad

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೌಕರಿ ಆಮಿಷವೊಡಿದ್ದ ವಂಚನೆ: ಪ್ರಕರಣ ದಾಖಲು

Update: 2025-08-12 20:04 IST

ಆರೋಪಿ ಮಂಜುನಾಥ ಮಲ್ಲಸರ್ಜ

ಬೆಳಗಾವಿ: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೌಕರಿ ಆಮಿಷವೊಡ್ಡಿ ಲಕ್ಷಾಂತರ ಹಣ ವಂಚಿಸಿದ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ‍‍ಪತ್ರ ಬರೆದಿದ್ದರು. ಸಂತ್ರಸ್ತರು ದೂರು ದಾಖಲಿಸಲು ಮುಂದೆ ಬಾರದ ಕಾರಣ ಎಫ್‌ಐಆರ್‌‌ ದಾಖಲು ಮಾಡಲು ವಿಳಂಬವಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.

‘ಮುಖ್ಯ ಆರೋಪಿ ಮಂಜುನಾಥ ಮಲ್ಲಸರ್ಜ ಎಂಬಾತ 14 ಮಂದಿಯಿಂದ ರೂ. 30 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದಾನೆ. ರಾಜ್ಯಪಾಲರ ಸಹಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರ ಸಹಿ ಹಾಗೂ ಅವರ ಆಪ್ತಸಹಾಯಕರ ಸಹಿಯನ್ನೂ ನಕಲು ಮಾಡಿದ್ದಾನೆ. ಸಚಿವರ ಲೆಟರ್‌ಹೆಡ್‌ಗಳನ್ನು ಬಳಸಿಕೊಂಡಿದ್ದು ಪತ್ತೆಯಾಗಿದೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾವ್ಯಾ ಎಂಬ ಮಹಿಳೆ ಹಣ ಕೊಟ್ಟು ಮೋಸಹೋಗಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ, ದೂರು ನೀಡಲು ಮುಂದೆ ಬಂದಿಲ್ಲ. ರಾಜ್ಯಪಾಲರು ಹಾಗೂ ಸಚಿವರ ಸಹಿ ನಕಲು ಮಾಡಿದ ಕಾರಣ ನಾವು ಪ್ರಕರಣ ದಾಖಲಿಸಲೇಬೇಕಾಗಿದೆ. ಈ ಬಗ್ಗೆ ಕಾವ್ಯಾ ಅವರಿಗೆ ನೋಟಿಸ್‌ ಕೊಟ್ಟು, ಮನವರಿಕೆ ಮಾಡಿದರೂ ದೂರು ನೀಡಿಲ್ಲ. ನಾಲ್ಕು ತಿಂಗಳ ಬಳಿಕ ಇನ್ನೊಬ್ಬ ಮಹಿಳೆ ಲಿಖಿತ ದೂರು ನೀಡಿದ್ದರಿಂದ ಈಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿದ್ದರಿಂದ ಆತನನ್ನು ಬಂಧಿಸಿಲ್ಲ. ಇದರಲ್ಲಿ ಯಾವುದೇ ರಾಜಕೀಯ ಒತ್ತಡದಿಂದ ಪೊಲೀಸರು ವಿಳಂಬ ಮಾಡಿಲ್ಲ’ ಎಂದರು.

‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತಸಹಾಯಕ ಸೋಮನಗೌಡ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ. ಇದು ತನಿಖೆ ಹಂತದಲ್ಲಿದೆ. ಸದ್ಯಕ್ಕೆ ಸೋಮನಗೌಡ ಭಾಗಿಯಾದ ಆಧಾರಗಳು ಇಲ್ಲ. ಇದೆಲ್ಲವನ್ನೂ ತನಿಖೆ ಮಾಡುವಂತೆ ಸ್ವತಃ ಸಚಿವರೇ ಸೂಚನೆ ನೀಡಿದ್ದಾರೆ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News