×
Ad

ಬೆಳಗಾವಿ | ಕ್ಷುಲ್ಲಕ ಕಾರಣಕ್ಕೆ ಅಟೋ ಚಾಲಕನಿಂದ ಹಲ್ಲೆ; ಕುಸಿದು ಬಿದ್ದು ಗೋವಾದ ಮಾಜಿ ಶಾಸಕ ಮೃತ್ಯು

Update: 2025-02-15 15:52 IST

ಲಾವೂ ಮಾಮಲೇದಾರ್ | PC: Facebook

ಬೆಳಗಾವಿ : ಕಾರು ತಾಗಿದ ಕ್ಷುಲ್ಲಕ ವಿಚಾರಕ್ಕೆ ಆಟೋರಿಕ್ಷಾ ಚಾಲಕ ಹಲ್ಲೆ ಮಾಡಿದ ಬಳಿಕ ಗೋವಾದ ಮಾಜಿ ಶಾಸಕ ಹಠಾತ್ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ಗೋವಾದ ಮಾಜಿ ಶಾಸಕ ಲಾವೂ ಮಾಮಲೇದಾರ್(69) ಮೃತಪಟ್ಟ ಮಾಜಿ ಶಾಸಕರಾಗಿದ್ದು, ಬೆಳಗಾವಿ ನಗರದ ಖಡೇಬಜಾರ್‌ ನಲ್ಲಿರುವ ಶ್ರೀನಿವಾಸ ಲಾಡ್ಜ್ ಎದುರು ಶನಿವಾರ ಘಟನೆ ಸಂಭವಿಸಿದೆ. ಮೃತ ಲಾವೂ ಅವರು ಗೋವಾ ರಾಜ್ಯದ ಪೋಡಾ ಕ್ಷೇತ್ರಕ್ಕೆ 2012-2017ರ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು.

ಬೆಳಗಾವಿ ನಗರದ ಖಡೇಬಜಾರ್ ಬಳಿ ಇರುವ ಲಾಡ್ಜ್‌ ನಲ್ಲಿ ಮಾಜಿ ಶಾಸಕ ಲಾವೂ ಮಾಮಲೇದಾರ್ ಉಳಿದುಕೊಂಡಿದ್ದರು. ಫೆ.15ರ ಶನಿವಾರ ಮಧ್ಯಾಹ್ನದ ವೇಳೆಗೆ ಲಾವೂ ಅವರು ತಮ್ಮ ಕೆಲಸ ಮುಗಿಸಿಕೊಂಡು ಲಾಡ್ಜ್ ಕಡೆಗೆ ಬರುವಾರ ಆಟೋಗೆ ಕಾರು ತಾಗಿದೆ. ಆಗ ಆಟೋ ಚಾಲಕ ಮಾಜಿ ಶಾಸಕರ ಕಪಾಳಕ್ಕೆ ಹೊಡೆದು ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಮೆಟ್ಟಿಲು ಏರಿ ಲಾಡ್ಜ್‌ ನಲ್ಲಿರುವ ರೂಮ್‍ಗೆ ಹೊರಟಿದ್ದ ವೇಳೆ ಏಕಾಏಕಿ ಲಾವೂ ಅವರು ಕುಸಿದು ಬಿದ್ದಿದ್ದಾರೆ. ಈ ಘಟನೆಯ ಸಂಪೂರ್ಣ ದೃಶ್ಯ ಲಾಡ್ಜ್‌ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ದೌಡಾಯಿಸಿದ ಮಾರ್ಕೆಟ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಸ್ಥಳಕ್ಕೆ ಡಿಸಿಪಿ ರೋಹನ್ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಈ ಘಟನೆ ಕುರಿತು ಡಿಸಿಪಿ ರೋಹನ್ ಜಗದೀಶ್ ಪ್ರತಿಕ್ರಿಯಿಸಿ, ‘ಶಾಸಕರ ಕಾರು ಟಚ್ ಆಗಿದೆ ಎಂಬ ವಿಚಾರ ಆಟೋ ಚಾಲಕ ಮತ್ತು ಅವರ ನಡುವೆ ಸಣ್ಣ ಜಗಳ ಆಗಿದೆ. ಆ ಬಳಿಕ ಆಟೋ ಚಾಲಕ ಅವರ ಕಪಾಳಕ್ಕೆ ಹೊಡೆಯುತ್ತಾನೆ. ನಂತರ ಮೆಟ್ಟಿಲು ಹತ್ತಿಕೊಂಡು ತಾವು ಉಳಿದುಕೊಂಡಿದ್ದ ರೂಮಿಗೆ ಹೋಗುವಾಗ ಕುಸಿದು ಬೀಳುತ್ತಾರೆ. ಕೂಡಲೇ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ, ಇಸಿಜಿ ಸೇರಿ ಮತ್ತಿತರ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ. ತನಿಖೆ ಮುಂದುವರಿಸಿದ್ದೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News