ಬೈಲಹೊಂಗಲದಲ್ಲಿ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ
ಬೈಲಹೊಂಗಲ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಬೈಲಹೊಂಗಲ ಪಟ್ಟಣದ ಹುಡೇದ ಬಾವಿ, ಹರಳಯ್ಯ ಕಾಲೋನಿ ಸೇರಿದಂತೆ ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಗ್ರಾಮೀಣ ಭಾಗದಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ಬೈಲವಾಡ ಗ್ರಾಮದ ಹತ್ತಿರದ ಹಳ್ಳ ತುಂಬಿ ನೇಸರಗಿ–ಬೈಲಹೊಂಗಲ ರಸ್ತೆ ಬಂದ್ ಕಾರಣ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಇದೇ ರೀತಿ ಹೊಸೂರ ಹತ್ತಿರ ಹಳ್ಳ ಉಕ್ಕಿ ಹರಿದು ಬೈಲಹೊಂಗಲ–ಮುನವಳ್ಳಿ ಮುಖ್ಯ ರಸ್ತೆ ಬಂದ್ ಆಗಿದೆ. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಿಲುಕಿಕೊಂಡಿದ್ದು, ಬಸ್ ಹಾಗೂ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರು ಪರ್ಯಾಯ ಮಾರ್ಗ ಹಿಡಿದು ತಲುಪಬೇಕಾದ ಪರಿಸ್ಥಿತಿ ಎದುರಾಗಿದೆ.
ಅತಿವೃಷ್ಟಿಯಿಂದ ಕೃಷಿ ಕ್ಷೇತ್ರಕ್ಕೂ ತೀವ್ರ ಹಾನಿಯ ಭೀತಿ ಎದುರಾಗಿದೆ. ವಿಶೇಷವಾಗಿ ಸೋಯಾಬಿನ್ ಹಾಗೂ ಹಂಗಾಮಿನ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಿರುವುದರಿಂದ ರೈತರು ಆತಂಕದಲ್ಲಿದ್ದಾರೆ.