ಕುರ್ ಆನ್ ಸುಟ್ಟ ಪ್ರಕರಣದ ತನಿಖೆಗೆ ಸಿಐಡಿಗೆ ವರ್ಗಾವಣೆ: ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ
ಬೆಳಗಾವಿ ನಗರ ಪೊಲೀಸ್ ಆಯಕ್ತ ಭೂಷಣ್ ಗುಲಾಬ್ ರಾವ್ ಬೊರಸೆ
ಬೆಳಗಾವಿ: ಸಂತಿಬಸ್ತವಾಡ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕುರ್ ಆನ್ ಪ್ರತಿಗಳನ್ನು ಸುಟ್ಟು ಹಾಕಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯಕ್ತ ಭೂಷಣ್ ಗುಲಾಬ್ ರಾವ್ ಬೊರಸೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ತನಿಖೆಯನ್ನು ಈಗಾಗಲೇ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ತನಿಖೆಗೆ ಬೆಳಗಾವಿ ನಗರ ಪೊಲೀಸರು ಎಲ್ಲಾ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಈ ದುಷ್ಕೃತ್ಯ ಎಸಗಿದವರನ್ನು ಶೀಘ್ರದಲ್ಲೇ ಪತ್ತೆ ಹಚ್ಚಿ, ದುಷ್ಕರ್ಮಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು
ಸಂತಿಬಸ್ತವಾಡ ಗ್ರಾಮದಲ್ಲಿರುವ ನಿರ್ಮಾಣ ಹಂತದ ಮಸೀದಿ ಕೆಳ ಮಹಡಿಯಲ್ಲಿ ಕುರ್ಆನ್ ಪ್ರತಿಗಳಿದ್ದವು. ಕಳೆದ ಮೇ 12ರಂದು ಮುಂಜಾನೆ ಮುಸ್ಲಿಮ್ ಬಾಂಧವರು ಪ್ರಾರ್ಥನೆ ಆಗಮಿಸಿದಾಗ ಕುರ್ ಆನ್ ಪ್ರತಿಗಳು ನಾಪತ್ತೆಯಾಗಿದ್ದವು. ಸ್ಥಳೀಯರು ಹುಡುಕಾಡಿದಾಗ ಮಸೀದಿಯ ಪಕ್ಕದ ಜಮೀನಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಕುರ್ಆನ್ ಪತ್ತೆಯಾಗಿತ್ತು.
ಈ ದುಷ್ಕೃತ್ಯ ಎಸಗಿರುವ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಮುಸ್ಲಿಮರು ಮೇ 16ರಂದು ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು.