‘ಕೆಇಎ’ ಅಭ್ಯರ್ಥಿಗಳಿಗೆ ಹೊರೆಯಾಗದಂತೆ ಅರ್ಜಿ ಶುಲ್ಕ ನಿಗದಿ : ಡಾ.ಎಂ.ಸಿ.ಸುಧಾಕರ್
ಬೆಳಗಾವಿ(ಸುವರ್ಣವಿಧಾನಸೌಧ) : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಹುದ್ದೆಗಳ ನೇಮಕಾತಿಯ ಪರೀಕ್ಷೆ ಸಂದರ್ಭದಲ್ಲಿ ಬಡ ಹಾಗೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆರ್ಥಿಕವಾಗಿ ಹೊರೆಯಾಗದಂತೆ ಪರೀಕ್ಷಾ ಶುಲ್ಕ ನಿಗದಿಪಡಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದ್ದಾರೆ.
ಸೋಮವಾರ ಪರಿಷತ್ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ನಿರಾಣಿ ಹನುಮಂತಪ್ಪ ರುದ್ರಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2024ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರಕಾರದ ವಿವಿಧ ಹುದ್ದೆಗಳ ನೇಮಕಾತಿಗಾಗಿ 17 ನೇಮಕಾತಿ ಅಧಿಸೂಚನೆಗಳನ್ನು ಪೂರ್ಣಗೊಳಿಸಿಲ್ಲ. 2024ರಲ್ಲಿ ಕೆಲವೇ ಅಧಿಸೂಚನೆಗಳನ್ನು ಹೊರಡಿಸಿ ಶುಲ್ಕ ಸಂಗ್ರಹಿಸಿದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸರಕಾರದಿಂದ ಯಾವುದೇ ಅನುದಾನ ನೀಡಲಾಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕೇಂದ್ರಗಳಿಗೆ ತಗಲುಬಹುದಾದ ವೆಚ್ಚಗಳು, ಗೌಪ್ಯತಾ ವೆಚ್ಚಗಳು, ಮುದ್ರಣ, ಗೌಪ್ಯತಾ ಬಂಡಲುಗಳನ್ನು ಆಯಾ ಪರೀಕ್ಷಾ ಕೇಂದ್ರಗಳಿಗೆ ರವಾನಿಸುವುದು, ಪರೀಕ್ಷೆ ಮುಗಿದ ನಂತರ ಗೌಪ್ಯತಾ ಬಂಡಲುಗಳನ್ನು ಪ್ರಾಧಿಕಾರಕ್ಕೆ ತೆಗೆದುಕೊಂಡು ಬರುವುದು, ಪರೀಕ್ಷಾ ಕಾರ್ಯಗಳಲ್ಲಿ ನಿರತರಾಗುವ ಅಧಿಕಾರಿ, ಸಿಬ್ಬಂದಿಗೆ ಗೌರವಧನ ಭರಿಸುವುದು ಮುಂತಾದ ಎಲ್ಲಾ ವೆಚ್ಚಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವೇ ಭರಿಸುತ್ತದೆ ಎಂದು ಸುಧಾಕರ್ ವಿವರಿಸಿದರು.
ಇತ್ತೀಚಿನ ದಿನಗಳಲ್ಲಿ ಪರೀಕ್ಷೆಗಳನ್ನು ಹೆಚ್ಚಿನ ಪಾರದರ್ಶಕವಾಗಿ ನಡೆಸಲು ಆಧುನಿಕ ತಂತ್ರಜ್ಞಾನ ಬಳಕೆ ಮಾಡುವುದು ಅನಿವಾರ್ಯವಾಗಿದ್ದು, ಅರ್ಜಿಗೆ ನಿಗದಿಪಡಿಸಿರುವ ಅರ್ಜಿ ಶುಲ್ಕದಲ್ಲಿ ಎಲ್ಲಾ ವೆಚ್ಚಗಳನ್ನು ನಿಭಾಯಿಸುವುದು ಕಷ್ಟಸಾಧ್ಯವಾಗುತ್ತಿದೆ. ಅಭ್ಯರ್ಥಿಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಿಲ್ಲದೆ ಪ್ರಾಧಿಕಾರವು ಪರೀಕ್ಷೆಯನ್ನು ನಡೆಸಲು ಕನಿಷ್ಠ ಮೊತ್ತವನ್ನು ನಿಗದಿಪಡಿಸಿದ್ದು, ಅಭ್ಯರ್ಥಿಗಳಿಂದ ನಿಗದಿಪಡಿಸಿರುವ ಶುಲ್ಕ ಪಡೆಯುವುದು ಅನಿವಾರ್ಯವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಯಾವುದೇ ಆರ್ಥಿಕ ಲಾಭ ಇರುವುದಿಲ್ಲ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2022ರಲ್ಲಿದ್ದ ಬಿಜೆಪಿ ಸರಕಾರದ ಅವಧಿಯಿಂದ ಇಷ್ಠೇ ನಿಗದಿ ಶುಲ್ಕವನ್ನು ವಿಧಿಸುತ್ತಿದ್ದು, ಪರೀಕ್ಷೆ ನಡೆಸುವ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾದರೂ ಸಹ ಬಡ ಹಾಗೂ ಗ್ರಾಮೀಣ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಶುಲ್ಕವನ್ನು ಹೆಚ್ಚಿಸಿಲ್ಲ ಹಾಗೂ ಆರ್ಥಿಕ ಹೊರ ತಪ್ಪಿಸಲು ಒಂದೇ ಪಠ್ಯಕ್ರಮವಿರುವ ವಿವಿಧ ಇಲಾಖೆಯ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ ಮೊದಲ ಹುದ್ದೆಗೆ ಮಾತ್ರ ಅವರಿಗೆ ಅನ್ವಯಿಸುವ ಪೂರ್ಣ ಅರ್ಜಿ ಶುಲ್ಕ ಪಾವತಿಸಲು ಹಾಗೂ ಹೆಚ್ಚುವರಿ ಹುದ್ದೆಗೆ ಕೇವಲ 100 ರೂ. ವಿಧಿಸಲಾಗುತ್ತಿದೆ ಎಂದು ಸುಧಾಕರ್ ತಿಳಿಸಿದರು.
ಕೇಂದ್ರ ಲೋಕ ಸೇವಾ ಆಯೋಗದ ಮಾದರಿಯಲ್ಲಿ ಅಥವಾ ಕರ್ನಾಟಕ ಲೋಕ ಆಯೋಗದ ಮಾದರಿಯಲ್ಲಿ ಅರ್ಜಿ ಶುಲ್ಕ ನಿಗದಿ ಪಡಿಸಬಹುದಲ್ಲವೇ? ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ರಾಜ್ಯ ಸರಕಾರದಿಂದ ಯಾವುದೇ ಅನುದಾನವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೀಡಲಾಗುತ್ತಿಲ್ಲ. ಆದ್ದರಿಂದ, ಕೇಂದ್ರ/ರಾಜ್ಯ ಲೋಕ ಸೇವಾ ಆಯೋಗದ ಮಾದರಿಯಲ್ಲಿ ಶುಲ್ಕ ವಿಧಿಸಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.