ಶ್ರಮಿಕ ವಸತಿ ಸಹಿತ ಶಾಲೆಗಳ ಟೆಂಡರ್ ನಲ್ಲಿ ಅಕ್ರಮ ನಡೆದಿಲ್ಲ: ಸಚಿವ ಸಂತೋಷ್ ಲಾಡ್
ಬೆಳಗಾವಿ(ಸುವರ್ಣವಿಧಾನಸೌಧ) : ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ರಾಜ್ಯದ 32 ಕಡೆಗಳಲ್ಲಿ ಸುಮಾರು 784 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರಮಿಕ ವಸತಿ ಸಹಿತ ಶಾಲೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಗೋವಿಂದರಾಜು ಅವರ ಗಮನ ಸೆಳೆಯುವ ಸೂಚನೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ವಸತಿ ಶಾಲೆಗಳನ್ನು ನಿರ್ಮಾಣ ಮಾಡಲು ಸರಕಾರ ಆಡಳಿತಾತ್ಮಕ ಅನುಮೋದನೆಯನ್ವಯ ಟೆಂಡರ್ ಕರೆಯಲಾಗಿದ್ದು, ಪ್ರಸ್ತುತ ವಿವಿಧ ಬಿಡ್‌ದಾರರ ಬಿಡ್‌ಗಳ ಮೌಲ್ಯಮಾಪನ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳನ್ವಯ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಮುಕ್ತ ಟೆಂಡರ್ ಕರೆಯಲಾಗಿದ್ದು, ಅರ್ಹತಾ ಮಾನದಂಡಗಳನ್ನು ಪೂರೈಸುವ ಯಾವುದೇ ಬಿಡ್‌ದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗಿದೆ. ಈ ಕಾಮಗಾರಿಯ ಸಮರ್ಪಕ ನಿರ್ವಹಣೆ ಅನುಷ್ಠಾನ ಹಾಗೂ ಮೇಲುಸ್ತುವಾರಿಗೆ ಅನುಕೂಲವಾಗುವಂತೆ ರಾಜ್ಯದ ಕಂದಾಯ ವಿಭಾಗವಾರು ಟೆಂಡರ್ ಕರೆಯಲಾಗಿರುತ್ತದೆ.
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು ಹೊರಡಿಸಿರುವ ಸುತ್ತೋಲೆಯನ್ವಯ ಮಂಡಳಿಯ ವತಿಯಿಂದ ವಸತಿ ಶಾಲೆಯನ್ನು ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಮಂಡಳಿಯಿಂದ ಸ್ಥಾಪಿಸಲು ಉದ್ದೇಶಿಸಿರುವ ಶಾಲೆಗಳು ವಸತಿ ಶಾಲೆಗಳಾಗಿದ್ದು ಸರಕಾರ ಶಾಲೆಗಳು ವಸತಿ ಶಾಲೆಗಳಾಗಿರುವುದಿಲ್ಲ. ಆದುದರಿಂದ, ಈ ಯೋಜನೆಯ ಪ್ರಸ್ತಾವನೆಯ ಹಂತದಲ್ಲಿ ವಸತಿ ಶಾಲೆಗಳನ್ನು ನಿರ್ಮಿಸಿ ನಿರ್ವಹಿಸುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಅಧೀನದ ಸರಕಾರದ ಸಂಸ್ಥೆಯಾದ ಕ್ರೈಸ್ ನಿಂದ ಅಗತ್ಯ ಮಾಹಿತಿಯನ್ನು ಪಡೆಯಲಾಗಿದೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗದ ಕ್ರಮೀಕರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ, 1996 ಮತ್ತು ಕರ್ನಾಟಕ ನಿಯಮಗಳು 2006 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರ ಕಲ್ಯಾಣ ಮತ್ತು ಸಾಮಾಜಿಕ ಸುರಕ್ಷತೆಗಾಗಿ ಇರುವ ಶಾಸನವಾಗಿದ್ದು, ಈ ಕಾಯ್ದೆಯಡಿ ಸಂಗ್ರಹವಾದ ಸುಂಕ ಮೊತ್ತವನ್ನು ಸರಕಾರದ ಯಾವುದೇ ಯೋಜನೆಗಳಿಗೆ ವಿನಿಯೋಗಿಸಲು ಅವಕಾಶವಿರುವುದಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಎಲ್ಲಾ ನೀತಿ ನಿಯಮಗಳನ್ನು ಪಾಲಿಸಿ ಮುಕ್ತ ಟೆಂಡರ್ ಕರೆದು ಯೋಜನೆಯನ್ನು ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಯಾವುದೇ ಅಕ್ರಮಕ್ಕೆ ಅವಕಾಶವಿರುವುದಿಲ್ಲ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.