ಬೆಳಗಾವಿ | ಮಸೀದಿಯಲ್ಲಿದ್ದ ಕುರ್‌ಆನ್ ಕದ್ದೊಯ್ದು ಸುಟ್ಟು ಹಾಕಿದ ದುಷ್ಕರ್ಮಿಗಳು
ಬೆಳಗಾವಿ : ಮಸೀದಿಯಲ್ಲಿದ್ದ ಇಸ್ಲಾಂ ಧರ್ಮಗ್ರಂಥ ಕುರ್‌ಆನ್ ಪ್ರತಿಗಳನ್ನು ದುಷ್ಕರ್ಮಿಗಳು ಕದ್ದೊಯ್ದು ಸುಟ್ಟು ಹಾಕಿರುವ ಘಟನೆ ಬೆಳಗಾವಿ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಗ್ರಾಮದ ನಿರ್ಮಾಣ ಹಂತದ ಮಸೀದಿ ಕೆಳ ಮಹಡಿಯಲ್ಲಿ ಕುರ್‌ಆನ್ ಪ್ರತಿಗಳಿದ್ದವು. ಇಂದು (ಮೇ 12) ಬೆಳಿಗ್ಗೆ ಪ್ರಾರ್ಥನೆ ವೇಳೆ ಅವು ಕಾಣದಿದ್ದಾಗ, ಸ್ಥಳೀಯರು ಹುಡುಕಾಡಿದರು. ಈ ವೇಳೆ ಮಸೀದಿಯ ಪಕ್ಕದ ಜಮೀನಿನಲ್ಲಿ ಕುರ್‌ಆನ್ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, "ಮಧ್ಯರಾತ್ರಿ ಮಸೀದಿಯೊಳಗಿನ ಕುರ್‌ಆನ್ ಪ್ರತಿಗಳನ್ನು ಕೊಂಡೊಯ್ದಿದ್ದಾರೆ. ಬಳಿಕ ಅದನ್ನು ಸುಟ್ಟು ಹಾಕಿದ್ದಾರೆಂಬ ಮಾಹಿತಿ ಇದೆ. ಆರೋಪಿಗಳ ಬಂಧನಕ್ಕಾಗಿ ಈಗಾಗಲೇ ತಂಡ ರಚನೆ ಮಾಡಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುತ್ತೇವೆ" ಎಂದು ತಿಳಿಸಿದರು.
ಘಟನೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಧರಣಿ :
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮುಸ್ಲಿಂ ಮುಖಂಡರು ಪ್ರತಿಭಟನೆ ನಡೆಸಿದರು.