×
Ad

ಪಂಚಮಸಾಲಿ ಹೋರಾಟ | ಕಾನೂನು ಕೈಗೆತ್ತಿಕೊಂಡಾಗ ಲಾಠಿ ಚಾರ್ಜ್ ಅನಿವಾರ್ಯ ಆಗಿತ್ತು : ಜಿ.ಪರಮೇಶ್ವರ್‌

Update: 2024-12-12 13:06 IST

ಜಿ.ಪರಮೇಶ್ವರ್‌(PC:PTI)

ಬೆಳಗಾವಿ : "2ಎ ಮೀಸಲಾತಿ ಸಂಬಂಧ ಪಂಚಮಸಾಲಿ ಸಮಯದಾಯದವರು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡುತ್ತಿದ್ದರು. ಅಲ್ಲದೆ, ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಬಾರದು ಎಂದು ಹೇಳಲಾಗಿತ್ತು. ಆದರೆ ನ್ಯಾಯಾಲಯದ ಆದೇಶ ಮೀರಿ ಮುತ್ತಿಗೆ ಹಾಕಲು ಹೊರಟಾಗ ಮುನ್ನೆಚ್ಚರಿಕೆ ಕ್ರಮವಾಗಿ ಲಘು ಲಾಠಿ ಪ್ರಹಾರ ಆಗಿದೆ" ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪ್ರತಿಭಟನೆ ಅವರ ಹಕ್ಕು. ಟ್ರ್ಯಾಕ್ಟರ್ ತೆಗೆದುಕೊಂಡು ಮುತ್ತಿಗೆ ಹಾಕುತ್ತೇವೆ ಎಂದಾಗ, ಕೋರ್ಟ್‌ನಲ್ಲಿ ಟ್ರ್ಯಾಕ್ಟರ್ ಬೇಡ ಎಂದು ಆದೇಶ ಬಂತು. ವಿಧಾನಸೌಧಕ್ಕೆ ಚಲೋ ಮಾಡಲು ಸ್ವಾಮೀಜಿ ಕರೆ ನೀಡಿದರು. ಸ್ವಾಮೀಜಿಗಳು ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿತ್ತು. ನಮ್ಮ ತಪ್ಪಿದ್ದರೆ ಕ್ಷಮೆ ಕೇಳೋಣ. ಆದರೆ ನಿರ್ಬಂಧದ ನಿಯಮ ಉಲ್ಲಂಘನೆ ಮಾಡಿದ್ಯಾರು? ಕಾನೂನು ಕೈಗೆತ್ತಿಕೊಂಡಾಗ ಲಾಟಿ ಚಾರ್ಜ್ ಅನಿವಾರ್ಯ ಆಗಿತ್ತು" ಎಂದರು.

"ಪಂಚಮಸಾಲಿ ಹೋರಾಟಗಾರರು ಕಾನೂನು ಕೈಗೆತ್ತಿಕೊಂಡರು, ಸ್ವತಃ ಸಿಎಂ ಸಿದ್ದರಾಮಯ್ಯ ಹೋರಾಟದ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ನಾವು ಸಚಿವರನ್ನು ಪ್ರತಿಭಟನೆ ಸ್ಥಳಕ್ಕೆ ಕಳಿಸಿದಾಗಲೂ ಅವರು ಒಪ್ಪಲಿಲ್ಲ. ಹೋರಾಟಗಾರರು ತಾವೇ ಮೊದಲು ಚಪ್ಪಲಿ, ಕಲ್ಲು ಎಸೆದರು. ಸ್ವಾಮೀಜಿ ಸೇರಿದಂತೆ ಹಲವರು ಕಾನೂನು ಕೈಗೆತ್ತಿಕೊಂಡರು" ಎಂದು ಹೇಳಿದರು.

"ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದಾಗ ತಡೆಯುವುದು ಅನಿವಾರ್ಯ ಆಗಿತ್ತು. ಒಂದು ಹೋರಾಟಗಾರಿಗೆ ಹೀಗೆ ಮುತ್ತಿಗೆ ಹಾಕಲು ಅವಕಾಶ ನೀಡಿದರೆ, ನಾಳೆ ಎಲ್ಲರೂ ಮುತ್ತಿಗೆ ಹಾಕಲು ಬರುತ್ತಾರೆ. ಕೋರ್ಟ್ ತಡೆಯಾಜ್ಞೆ ಇದ್ದಾಗಲೂ ನಿರ್ಬಂಧದ ನಿಯಮಗಳನ್ನು ಸ್ವಾಮೀಜಿ ಸೇರಿದಂತೆ ಎಲ್ಲರೂ ಮುರಿದ್ದಾರೆ. ಇದಕ್ಕೆ ಸಂಬಂಧಿಸಿ ನಮ್ಮ ಬಳಿಯೂ ವೀಡಿಯೋ ದಾಖಲೆಗಳು ಫೋಟೋಗಳು ಇವೆ. ಸುಖಾ ಸುಮ್ಮನೆ ನಾವು ಲಾಠಿ ಚಾರ್ಜ್ ಮಾಡಿಲ್ಲ" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News