ಸಂಪುಟ ಪುನರ್ ರಚನೆ ಕುರಿತ ಚರ್ಚೆ; ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?
ಸತೀಶ್ ಜಾರಕಿಹೊಳಿ
ಬೆಂಗಳೂರು : ರಾಜ್ಯ ರಾಜಕೀಯ ವಲಯದಲ್ಲಿ ಸಚಿವ ಸಂಪುಟ ಪುನರ್ ರಚನೆಯ ಕುರಿತ ಚರ್ಚೆ ವೇಗ ಪಡೆದಿದೆ. ಈ ನಡುವೆ ಬೆಳಗಾವಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಸಂಪುಟ ಬದಲಾವಣೆಯ ಸಾಧ್ಯತೆಯ ಕುರಿತು ಸ್ಪಷ್ಟನೆ ನೀಡಿದರು.
“ಸಂಪುಟ ರಚನೆ ಬದಲಾವಣೆ ಆಗೇ ಆಗುತ್ತದೆ. ಹಳೆಯವರು ಹೊರಗೆ ಹೋಗಿ ಹೊಸವರು ಬಂದೇ ಬರುತ್ತಾರೆ. ಈ ಬಗ್ಗೆ ಮುಂಚೆಯೇ ಚರ್ಚೆ ನಡೆದಿತ್ತು, ಈಗ ಅದು ಅಂತಿಮ ಹಂತಕ್ಕೆ ಬಂದಿರಬಹುದು” ಎಂದು ಅವರು ಹೇಳಿದರು.
ಯಾರು ಸಚಿವರಾಗಿ ಬರುತ್ತಾರೆ ಪ್ರಶ್ನೆಗೆ ಅವರು ಪ್ರತಿಕ್ರಿಯಿಸುತ್ತಾ, “ಅದು ಸಂಪೂರ್ಣವಾಗಿ ಹೈಕಮಾಂಡ್‌ನ ವಿಚಾರ. ನಮ್ಮ ಹಂತದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆಯೋ ಅದನ್ನೆಲ್ಲರೂ ಪಾಲಿಸಬೇಕು,” ಎಂದು ಹೇಳಿದರು.
ಸಚಿವ ಕೃಷ್ಣ ಭೈರೇಗೌಡ ಅವರ ರಾಜೀನಾಮೆ ಹೇಳಿಕೆಯ ಕುರಿತು ಅವರು ಪ್ರತಿಕ್ರಿಯೆ ನೀಡುತ್ತಾ, “ಹೈಕಮಾಂಡ್ ನಿರ್ಧಾರ ಮಾಡಿದರೆ ಎಲ್ಲರೂ ಅನುಸರಿಸಲೇಬೇಕು. ಸಚಿವ ಸ್ಥಾನ ನೀಡುವ ಮಾನದಂಡವನ್ನು ಹೈಕಮಾಂಡ್, ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷರು ನಿರ್ಧರಿಸುತ್ತಾರೆ” ಎಂದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, “ಈ ವಿಚಾರದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಸಿಎಂ ಅವರೇ ಹೇಳಿದಂತೆ ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನ ಆಗಬೇಕು” ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಕುರಿತಾಗಿ ಯತೀಂದ್ರ ಸಿದ್ದರಾಮಯ್ಯ ನೀಡಿದ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, “ಯತೀಂದ್ರ ಅವರು ಅಹಿಂದ ನಾಯಕರ ವಿಷಯವಾಗಿ ಹೇಳಿದ್ದಾರೆ. ಅದಕ್ಕೆ ಸಿಎಂ ಅಥವಾ ಸಂಪುಟ ಬದಲಾವಣೆಗೂ ಯಾವುದೇ ಸಂಬಂಧ ಇಲ್ಲ. ಗೊಂದಲ ಬೇಡ” ಎಂದು ಹೇಳಿದರು.