ಕನ್ನಡಿಗರ ಒಗ್ಗಟ್ಟು, ಶ್ರಮ, ಪ್ರತಿಭೆಯೇ ಕರ್ನಾಟಕದ ಶಕ್ತಿ : ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ : ಕರ್ನಾಟಕದ ವೈಭವ, ಸಂಸ್ಕೃತಿ ಹಾಗೂ ಹೆಮ್ಮೆಯ ಪ್ರತೀಕವಾದ ಕನ್ನಡ ರಾಜ್ಯೋತ್ಸವದ 70ನೇ ವರ್ಷದ ಅಂಗವಾಗಿ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಜನತೆಗೆ ಶುಭಾಶಯ ಕೋರಿದ್ದಾರೆ.
ನಮ್ಮ ಕನ್ನಡ ನಾಡು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿದೆ. ಕನ್ನಡಿಗರ ಒಗ್ಗಟ್ಟು, ಶ್ರಮ ಮತ್ತು ಪ್ರತಿಭೆಯೇ ಕರ್ನಾಟಕದ ಶಕ್ತಿ. ಕನ್ನಡ ರಾಜ್ಯೋತ್ಸವವು ಕೇವಲ ಆಚರಣೆ ಅಲ್ಲ, ಇದು ನಮ್ಮ ಪರಂಪರೆ, ಗೌರವ ಮತ್ತು ಕನ್ನಡ ಗುರುತಿನ ಹಬ್ಬ ಎಂದು ಹೇಳಿದ್ದಾರೆ.
ಬೆಳಗಾವಿಯ ಗಡಿನಾಡಿನ ಜನತೆ ಸದಾ ಕನ್ನಡ ಧ್ವಜ ಎತ್ತಿ ಹಿಡಿದಿದ್ದಾರೆ. ಅವರ ನಿಷ್ಠೆ ಮತ್ತು ಅಭಿಮಾನವು ರಾಜ್ಯದ ಗೌರವವನ್ನು ಕಾಪಾಡುತ್ತಿದೆ. ಎಲ್ಲರೂ ಕನ್ನಡದ ಗೌರವ ಕಾಪಾಡಿ, ಅಭಿವೃದ್ಧಿಯ ಹಾದಿಯಲ್ಲಿ ಸಾಗೋಣ ಎಂದು ತಿಳಿಸಿದ್ದಾರೆ.
ರಾಜ್ಯೋತ್ಸವದ ಅಂಗವಾಗಿ ಬೆಳಗಾವಿ ನಗರ ಹಾಗೂ ತಾಲ್ಲೂಕುಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ಯಾರ್ಥಿ ಮೆರವಣಿಗೆಗಳು, ಧ್ವಜಾರೋಹಣ ಹಾಗೂ ಕನ್ನಡ ಕವಿಗಳ ಕಾವ್ಯಗಾನಗಳೊಂದಿಗೆ ಹಬ್ಬದ ಸಂಭ್ರಮ ಉಕ್ಕಿ ಹರಿಯುತ್ತಿದೆ.