ಬೆಳಗಾವಿ |ಕ್ಷುಲ್ಲಕ ವಿಚಾರಕ್ಕೆ ಯುವಕನ ಕೊಲೆ: ಇಬ್ಬರು ಆರೋಪಿಗಳ ಬಂಧನ
ಮುತ್ತಣ್ಣ ಗುಡಬಲಿ
ಬೆಳಗಾವಿ: ತಾಲ್ಲೂಕಿನ ಹುದಲಿ ಗ್ರಾಮದಲ್ಲಿ ರವಿವಾರ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮಾರಿಹಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುದಲಿಯ ಮಹೇಶ ನಾರಿ, ಸಿದ್ದಪ್ಪ ಮುತ್ತೆನ್ನವರ ಬಂಧಿತರು. ಮತ್ತೊಬ್ಬ ಆರೋಪಿ ವಿಶಾಲ ನಾರಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸ್ ಭದ್ರತೆಯಲ್ಲೇ ಇದ್ದಾನೆ. ಹುದಲಿಯ ಮುತ್ತಣ್ಣ ಗುಡಬಲಿ ಕೊಲೆಗೀಡಾದವರು.
‘ಶನಿವಾರ ರಾತ್ರಿ ಸ್ನೇಹಿತನ ಜನ್ಮದಿನ ಆಚರಣೆಗೆ ಮುತ್ತಣ್ಣ ಹೋಗಿದ್ದರು. ಜನ್ಮದಿನ ಆಚರಿಸಿದ ನಂತರ ಬೈಕ್ ಮೇಲೆ ಗೆಳೆಯರೆಲ್ಲ ಮರಳುವಾಗ, ನಾರಿ ಅವರ ಮನೆ ಮುಂದೆ ಕೂಗಿದ್ದರು. ಕೂಗಿದ್ದು ಮುತ್ತಣ್ಣ ಎಂದು ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಲಾಗಿತ್ತು. ಅಲ್ಲದೆ, ರವಿವಾರ ಬೆಳಿಗ್ಗೆ ಮತ್ತೆ ಆರೋಪಿಗಳು ಗಲಾಟೆ ಮಾಡಿ ಮಾರಕಾಸ್ತ್ರಗಳಿಂದ ಮುತ್ತಣ್ಣ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದರು’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮೃತ ಯುವಕ ಮತ್ತು ಆರೋಪಿಗಳೆಲ್ಲ ಪರಿಚಿತರಿದ್ದು, ಕೂಗಾಟದ ವಿಚಾರವಾಗಿಯೇ ಜಗಳವಾಗಿತ್ತು. ಆರೋಪಿಗಳಿಗೆ ಅಪರಾಧಿಕ ಹಿನ್ನೆಲೆ ಇಲ್ಲ. ಇದೇ ಮೊದಲ ಬಾರಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.