Ballari | ಮುಖ್ಯಗುರುಗಳ ಕಾರ್ಯಭಾರ ಕಡಿಮೆಗೊಳಿಸಲು ಆಗ್ರಹ
ಸಂಡೂರು/ಬಳ್ಳಾರಿ : ಮುಖ್ಯಗುರುಗಳ ಮೇಲಿನ ಆಡಳಿತಾತ್ಮಕ ಕಾರ್ಯಭಾರವನ್ನು ಕಡಿಮೆಗೊಳಿಸಿ, ಶಾಲೆಗಳ ಮೂಲಭೂತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರೇತರ ಮುಖ್ಯಗುರುಗಳ ಸಂಘದ ಸಂಡೂರು ತಾಲೂಕು ಘಟಕವು ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಸಂಘದ ಗೌರವಾಧ್ಯಕ್ಷ ಪಿ. ಪಾಂಡುರಂಗಪ್ಪ, ಅಧ್ಯಕ್ಷ ಕೆ.ಬಿ. ಪ್ರಕಾಶ, ಪ್ರಧಾನ ಕಾರ್ಯದರ್ಶಿ ಎ. ಎರಿಸ್ವಾಮಿ ಹಾಗೂ ಖಜಾಂಚಿ ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಮುಖ್ಯಗುರುಗಳ ಮೇಲೆ ಹೆಚ್ಚುತ್ತಿರುವ ಆಡಳಿತಾತ್ಮಕ ಜವಾಬ್ದಾರಿಗಳಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂದು ತಿಳಿಸಲಾಗಿದೆ.
ಬಿಸಿಯೂಟ ನಿರ್ವಹಣೆ, ವಿವಿಧ ಆನ್‌ಲೈನ್ ದಾಖಲಾತಿ, ಇಲಾಖಾ ವರದಿಗಳ ಸಲ್ಲಿಕೆ, ಸಂಭ್ರಮ ಶನಿವಾರ, ಓದು ಕರ್ನಾಟಕ, ಬೇಸಿಗೆ ಭಾಷಾ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಹೊಣೆಗಾರಿಕೆಯಿಂದ ಮುಖ್ಯಗುರುಗಳು ತೀವ್ರ ಒತ್ತಡಕ್ಕೆ ಒಳಗಾಗಿದ್ದು, ಇದರಿಂದ ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ ಹಾಗೂ ಶಾಲಾ ನಿರ್ವಹಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಸಂಘ ತಿಳಿಸಿದೆ.
ಮುಖ್ಯಗುರುಗಳ ಕಾಲಮಿತಿ ವೇತನ ಬಡ್ತಿಯನ್ನು ಎಚ್‌ಆರ್‌ಎಂಎಸ್‌ನಲ್ಲಿ ತ್ವರಿತವಾಗಿ ದಾಖಲಿಸುವುದು, ಶಾಲಾ ಅವಧಿಯಲ್ಲಿ ಭೌತಿಕ ಸಭೆ ಹಾಗೂ ತರಬೇತಿಗಳನ್ನು ನಡೆಸದಿರುವುದು, ಸಮವಸ್ತ್ರ, ಗಣಿತ ಹಾಗೂ ವಿಜ್ಞಾನ ಕಿಟ್ ಸೇರಿದಂತೆ ಶೈಕ್ಷಣಿಕ ಸಾಮಗ್ರಿಗಳನ್ನು ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಪೂರೈಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದೇ ವೇಳೆ, ಶಿಥಿಲಗೊಂಡ ಶಾಲಾ ಕಟ್ಟಡಗಳ ದುರಸ್ತಿ ಅಥವಾ ಪುನರ್‌ನಿರ್ಮಾಣ, ಶೌಚಮಿತ್ರ ಸಿಬ್ಬಂದಿ ಹಾಗೂ ಡೇಟಾ ಆಪರೇಟರ್‌ಗಳ ಮರುನೇಮಕ, ಎಐ ಆಧಾರಿತ ವಿದ್ಯಾರ್ಥಿಗಳ ಹಾಜರಾತಿ ವ್ಯವಸ್ಥೆಯ ತಾಂತ್ರಿಕ ಸಮಸ್ಯೆ ಬಗೆಹರಿಯುವವರೆಗೆ ಹಿಂದಿನ ಹಾಜರಾತಿ ಪದ್ಧತಿಯನ್ನು ಮುಂದುವರಿಸುವಂತೆ ಸಂಘ ಒತ್ತಾಯಿಸಿದೆ.
ಮುಖ್ಯಗುರುಗಳು ಆಡಳಿತಾತ್ಮಕ ಒತ್ತಡದಿಂದ ಮುಕ್ತರಾಗಿ ಸಂಪೂರ್ಣವಾಗಿ ಶೈಕ್ಷಣಿಕ ಚಟುವಟಿಕೆಗಳತ್ತ ಗಮನಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.