Ballari | ನವವಿವಾಹಿತನ ಹತ್ಯೆ ಪ್ರಕರಣ : ಮೂವರ ಬಂಧನ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸಿದ್ದಾರೆ. ಕೌಲ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನವವಿವಾಹಿತ ಯುವಕನ ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದರೆ, ಬ್ರೂಸ್‌ಪೇಟೆ ಠಾಣೆ ವ್ಯಾಪ್ತಿಯ ಲಕ್ಷಾಂತರ ರೂಪಾಯಿ ಮೌಲ್ಯದ ಪೇಂಟ್ ಕಳವು ಪ್ರಕರಣದಲ್ಲೂ ಆರೋಪಿಯನ್ನು ಬಂಧಿಸಿ ಹೆಚ್ಚಿನ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ಪಾರ್ಟಿಯಲ್ಲೇ ನವವಿವಾಹಿತನ ಕೊಲೆ :
ಜು.16ರಂದು ರಾತ್ರಿ ಭಟ್ಟಿ ಏರಿಯಾದಲ್ಲಿ 21 ವರ್ಷದ ನಬಿ ರಸೂಲ್ ಎಂಬ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ವೇಳೆ, ವಿವಾಹದ ಸಂಭ್ರಮಾಚರಣೆಗೆ ಸ್ನೇಹಿತರಿಗೆ ಪಾರ್ಟಿ ನೀಡಿದ್ದ ಸಂದರ್ಭದಲ್ಲಿ ಮದ್ಯಪಾನದ ವೇಳೆ ಮಾತಿನ ಚಕಮಕಿ ನಡೆದಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಕೋಪಗೊಂಡು ಚಾಕುವಿನಿಂದ ಇರಿದು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಜೊತೆಗೆ ತಾಹೀರ ಮತ್ತು ಸಮೀರ್ ಅವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಸಲ್ಮಾನ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
15.27 ಲಕ್ಷ ರೂ. ಮೌಲ್ಯದ ಪೇಂಟ್ ವಶ :
ಮತ್ತೊಂದು ಪ್ರಕರಣದಲ್ಲಿ, ಶಾಸ್ತ್ರಿನಗರದ ಪೇಂಟ್ ಗೋಡೌನ್‌ನಿಂದ ಸುಮಾರು 27.79 ಲಕ್ಷ ರೂ. ಮೌಲ್ಯದ ಡುಲೆಕ್ಸ್ ಪೇಂಟ್ ಡಬ್ಬೆಗಳು ಕಳುವಾಗಿದ್ದ ಪ್ರಕರಣವನ್ನು ಬ್ರೂಸ್‌ಪೇಟೆ ಪೊಲೀಸರು ಭೇದಿಸಿದ್ದಾರೆ.
ತನಿಖೆಯಲ್ಲಿ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ಜೋಸೆಫ್ (23) ಕಳವು ನಡೆಸಿರುವುದು ದೃಢಪಟ್ಟಿದ್ದು, ಆತನನ್ನು ಬಂಧಿಸಿ 12.21 ಲಕ್ಷ ರೂ. ಮೌಲ್ಯದ 279 ಡುಲೆಕ್ಸ್ ಪೇಂಟ್ ಡಬ್ಬೆಗಳು ಹಾಗೂ 3.06 ಲಕ್ಷ ರೂ. ನಗದು ಸೇರಿದಂತೆ ಒಟ್ಟು 15.27 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.
ಎರಡೂ ಪ್ರಕರಣಗಳನ್ನು ಶೀಘ್ರವಾಗಿ ಭೇದಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ. ಪೆನೈಕರ್ ಅಭಿನಂದಿಸಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.