Ballari | ಕಂಪ್ಲಿ ಭಾಗದಲ್ಲಿ ಧಾರಾಕಾರ ಮಳೆ; ರೈತರ ಮೊಗದಲ್ಲಿ ಮಂದಹಾಸ
ಬಳ್ಳಾರಿ/ಕಂಪ್ಲಿ: ಮುಂಗಾರು ಕೈಕೊಟ್ಟಿದ್ದರಿಂದ ಆತಂಕದಲ್ಲಿದ್ದ ರೈತರಿಗೆ ಶನಿವಾರ ಸುರಿದ ಧಾರಾಕಾರ ಮಳೆ ನೆಮ್ಮದಿ ತಂದಿದೆ. ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಿದೆ.
ಕಳೆದ ಎರಡು ತಿಂಗಳಿಂದ ಸಮರ್ಪಕ ಮಳೆಯಿಲ್ಲದೆ ರೈತರು ಸಂಕಷ್ಟ ಅನುಭವಿಸುತ್ತಿದ್ದರು. ಉರಿ ಬಿಸಿಲಿನಿಂದ ಭೂಮಿ ಬಿರುಕು ಬಿಟ್ಟಿದ್ದರೆ, ಮಳೆ ಆಶ್ರಿತ ಬೆಳೆಗಳು ನೀರಿಲ್ಲದೆ ಒಣಗುವ ಸ್ಥಿತಿಗೆ ತಲುಪಿದ್ದವು. ಇಂತಹ ಸಂದರ್ಭದಲ್ಲಿ ಮಧ್ಯಾಹ್ನ ಸುಮಾರು 3.45ರ ವೇಳೆಗೆ ಆರಂಭವಾದ ಮಳೆ ಕಂಪ್ಲಿ ಪಟ್ಟಣ, ನಂ.10 ಮುದ್ದಾಪುರ, ರಾಮಸಾಗರ, ಸಣಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಾರು ಒಂದು ಗಂಟೆ ಸುರಿಯಿತು.
ಮಳೆಗಾಗಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಜಲಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ್ದ ರೈತರು ಮತ್ತು ಗ್ರಾಮಸ್ಥರ ಪ್ರಾರ್ಥನೆ ಫಲಿಸಿದಂತಾಗಿದೆ. ಮಳೆಯಿಂದ ಬೆಳೆಗಳಿಗೆ ನೀರು ದೊರೆತು ಚಿಗುರೊಡೆಯುವ ನಿರೀಕ್ಷೆ ಮೂಡಿದ್ದು, ಹಸಿ ಮೇವು ಬೆಳೆಯಲು ಸಹ ಅನುಕೂಲವಾಗಲಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದರು.
ನಿರಂತರ ಮಳೆಯಾದರೆ ಕೆರೆ, ಹಳ್ಳ, ಕೊಳ್ಳಗಳು ತುಂಬಿ ಭೂಗರ್ಭ ಜಲಮಟ್ಟ ಹೆಚ್ಚುವುದರ ಜೊತೆಗೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.
ಮಳೆಯ ವೇಳೆ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಪೋಷಕರು ಟವಲ್ ಹೊದಿಸಿ ಬೈಕ್‌ಗಳಲ್ಲಿ ಕರೆದೊಯ್ದರೆ, ಕೆಲವರು ಛತ್ರಿಯ ನೆರವಿನಲ್ಲಿ ಮನೆ ತಲುಪಿದರು. ಇನ್ನೂ ಕೆಲ ಮಕ್ಕಳು ಮಳೆಯಲ್ಲೇ ನೆನೆಯುತ್ತಾ ಸಂಭ್ರಮಿಸಿದರು. ಮಳೆ ಜೋರಾಗಿದ್ದರಿಂದ ಸಾರ್ವಜನಿಕರು ಅಂಗಡಿ ಹಾಗೂ ಶೆಡ್‌ಗಳಲ್ಲಿ ಆಶ್ರಯ ಪಡೆದು, ಮಳೆ ಕಡಿಮೆಯಾದ ಬಳಿಕ ತಮ್ಮ ಗಮ್ಯಸ್ಥಾನಗಳಿಗೆ ತೆರಳಿದರು.