Ballari | ಬಿಸಿಯೂಟ ನಿರ್ವಹಣೆಯಿಂದ ಮುಖ್ಯಗುರುಗಳಿಗೆ ಮುಕ್ತಿ ನೀಡಲು ಆಗ್ರಹ
ಪಿಎಂ ಪೋಷಣ್ ಯೋಜನೆಯ ಸಮಸ್ಯೆಗಳ ಪರಿಹಾರಕ್ಕೆ ತಾಪಂ ಇಒಗೆ ಮನವಿ
ಸಂಡೂರು/ಬಳ್ಳಾರಿ: ಪಿಎಂ ಪೋಷಣ್ (ಮಧ್ಯಾಹ್ನ ಬಿಸಿಯೂಟ) ಯೋಜನೆಯಡಿ ಶಾಲೆಗಳಲ್ಲಿ ಎದುರಾಗಿರುವ ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ, ಮುಖ್ಯಗುರುಗಳನ್ನು ಬಿಸಿಯೂಟ ಯೋಜನೆ ನಿರ್ವಹಣೆಯ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರೇತರ ಮುಖ್ಯಗುರುಗಳ ಸಂಘದ ಸಂಡೂರು ತಾಲೂಕು ಘಟಕವು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿತು.
ಸಂಘದ ಗೌರವಾಧ್ಯಕ್ಷ ಪಿ. ಪಾಂಡುರಂಗಪ್ಪ, ಅಧ್ಯಕ್ಷ ಕೆ.ಬಿ. ಪ್ರಕಾಶ, ಪ್ರಧಾನ ಕಾರ್ಯದರ್ಶಿ ಎ. ಎರಿಸ್ವಾಮಿ ಹಾಗೂ ಖಜಾಂಚಿ ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಕ್ಷೀರಭಾಗ್ಯ, ಬಿಸಿಯೂಟ, ಪೂರಕ ಪೌಷ್ಟಿಕ ಆಹಾರ, ಮೊಟ್ಟೆ/ಬಾಳೆಹಣ್ಣು ಹಾಗೂ ಸಂಜೆ ತಿಂಡಿ ವಿತರಣೆಯ ಸಂಪೂರ್ಣ ಹೊಣೆ ಮುಖ್ಯಗುರುಗಳ ಮೇಲಿದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದ್ದು, ಗುಣಮಟ್ಟದ ಶಿಕ್ಷಣದ ಮೇಲೂ ಪರಿಣಾಮ ಬೀರುತ್ತಿದೆ ಎಂದು ತಿಳಿಸಲಾಗಿದೆ.
ಮುಖ್ಯಗುರುಗಳನ್ನು ಈ ಆಡಳಿತಾತ್ಮಕ ಜವಾಬ್ದಾರಿಯಿಂದ ಮುಕ್ತಗೊಳಿಸಿ, ಬಿಸಿಯೂಟ ಯೋಜನೆಯ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ರೂಪಿಸಬೇಕು ಎಂದು ಸಂಘ ಆಗ್ರಹಿಸಿದೆ.
ಪ್ರತಿ 15 ದಿನಗಳಿಗೊಮ್ಮೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ, ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆಯ ದರ ಪರಿಷ್ಕರಣೆ ಅಥವಾ ಕನಿಷ್ಠ 8 ರೂ. ನಿಗದಿ, ಆಹಾರ ಧಾನ್ಯಗಳನ್ನು ತಿಂಗಳ ಆರಂಭದಲ್ಲೇ ಶಾಲೆಗಳಿಗೆ ತಲುಪಿಸುವುದು ಹಾಗೂ ಮೊಟ್ಟೆ, ಬಾಳೆಹಣ್ಣು, ತರಕಾರಿ, ಸಕ್ಕರೆ ಮತ್ತು ಉಸುಳಿಕಾಳಿನ ವೆಚ್ಚವನ್ನು ಮುಂಗಡವಾಗಿ ಶಾಲೆಗಳ ಖಾತೆಗೆ ಜಮಾ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದೇ ವೇಳೆ ಬಿಸಿಯೂಟ ಯೋಜನೆಯ ಹಣಕಾಸು ಮತ್ತು ಆಡಳಿತಾತ್ಮಕ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವುದು, ಹಿಂದಿನಂತೆ ಗೌರವಧನ ಆಧಾರದ ಮೇಲೆ ಶೌಚಮಿತ್ರ ಸಿಬ್ಬಂದಿ ಹಾಗೂ ಡೇಟಾ ಆಪರೇಟರ್‌ಗಳನ್ನು ನೇಮಕ ಮಾಡುವುದು ಮತ್ತು ವಿದ್ಯಾರ್ಥಿಗಳ ಎಐ ಆಧಾರಿತ ಹಾಜರಾತಿ ವ್ಯವಸ್ಥೆಯ ತಾಂತ್ರಿಕ ಸಮಸ್ಯೆಗಳು ಬಗೆಹರಿಯುವವರೆಗೆ ಹಿಂದಿನ ಹಾಜರಾತಿ ಪದ್ಧತಿಯನ್ನು ಮುಂದುವರಿಸಬೇಕು ಎಂದು ಸಂಘ ಮನವಿ ಮಾಡಿದೆ.
ಮುಖ್ಯಗುರುಗಳ ಮೇಲಿರುವ ಹೆಚ್ಚುವರಿ ಆಡಳಿತಾತ್ಮಕ ಒತ್ತಡ ಕಡಿಮೆ ಮಾಡಿ, ಅವರು ಸಂಪೂರ್ಣವಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳತ್ತ ಗಮನಹರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.