ಬಳ್ಳಾರಿ | ಅಕ್ಷರಬೀಜ ಬಿತ್ತಿದ ಶಿಕ್ಷಣ ಸಾಧಕಿ ಸಾವಿತ್ರಿಬಾಯಿ ಫುಲೆ : ಕೆ.ಶ್ವೇತಾ
ಬಳ್ಳಾರಿ, ಜ. 3: ಅನೇಕ ಕಷ್ಟ, ಅವಮಾನಗಳನ್ನು ಸಹಿಸಿಕೊಂಡು ಜೀವನವಿಡೀ ಹೋರಾಟ ನಡೆಸಿದ ಸಾವಿತ್ರಿಬಾಯಿ ಫುಲೆ ಅವರು ದಲಿತರು ಮತ್ತು ಮಹಿಳೆಯರ ಹೃದಯದಲ್ಲಿ ಅಕ್ಷರ ಬೀಜ ಬಿತ್ತಿದ ಶಿಕ್ಷಣ ಸಾಧಕಿ ಎಂದು ಮುಖ್ಯೋಪಾಧ್ಯಾಯನಿ ಕೆ.ಶ್ವೇತಾ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಪಟ್ಟಣದ ಸ್ಥಳೀಯ ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ಅವರ 194ನೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳಿಂದ ಅಕ್ಷರ ಲೋಕದಿಂದ ವಂಚಿತರಾದ ದಲಿತರು, ಮಹಿಳೆಯರಿಗೆ ಸ್ವತಃ ಶಿಕ್ಷಕಿಯಾಗಿ ಅಕ್ಷರಮಾಲೆ ತೊಡಿಸಿದವರು ಫುಲೆ. ಶೋಷಣೆಯಿಂದ ಪಾರಾಗಲು ಸ್ವಾಭಿಮಾನದ ಜೀವನಕ್ಕೆ ದಾರಿದೀಪವಾದ ಅಕ್ಷರಮಾತೆ. ಅವರ ಜಯಂತಿ ಆಚರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅವರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬಾಲವಿಧವೆಯರ ನಿಲಯ, ಶಾಲೆ, ಹಾಸ್ಟೆಲ್‌ಗಳನ್ನು ತೆರೆದು ಸಮಾಜ ಸುಧಾರಣೆ ಮಾಡಿದ ಜ್ಯೋತಿಭಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಯನ್ನು ಈಗಲಾದರೂ ಸ್ಮರಿಸುವ ಅವಕಾಶ ದೊರೆಕಿಸಿಕೊಟ್ಟಿರುವುದು ಅವರ ತ್ಯಾಗಕ್ಕೆ ಸಂದ ಗೌರವವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಉಮಾ ಕೊಲ್ಕರ್, ವರ್ಷಾ ಮಜುಮದಾರ್, ಜೆ. ಅಕ್ಷತಾ, ಗೌಸಿಯ, ಸುನೀತಾ, ನಂದಿನಿ, ಕೊಲ್ಕರ್ ಜಯಶ್ರೀ, ವಿದ್ಯಾರ್ಥಿಗಳು ಹಾಗೂ ಪಾಲಕ ಪೋಷಕರು ಹಾಜರಿದ್ದರು.