ಬಳ್ಳಾರಿ | CEPMIZ ಯೋಜನೆಯಡಿ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ
ಬಳ್ಳಾರಿ : ಗಣಿಬಾಧಿತ ವಲಯ ಪ್ರದೇಶದ ರೈತರಿಗೆ ತಮ್ಮ ತಮ್ಮ ಜಮೀನುಗಳಲ್ಲಿ ಯಾವ ರೀತಿಯಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಬೇಕು, ಸಂರಕ್ಷಣೆಯನ್ನು ಮಾಡಲು ಯಾವ ರೀತಿಯಾಗಿ ಉಪಚಾರ ಕೈಗೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಡುವುದು ಗಣಿಗಾರಿಕೆ ಪ್ರಭಾವಿತ ವಲಯಗಳ ಸಮಗ್ರ ಪರಿಸರ ಯೋಜನೆಯ ಉದ್ದೇಶವಾಗಿದೆ ಎಂದು ಉಪ ಕೃಷಿ ನಿರ್ದೇಶಕ ಮಂಜುನಾಥ್ ಅವರು ಹೇಳಿದರು.
ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಬಳ್ಳಾರಿ ಹಾಗೂ ಗ್ರಾಮ್ಸ್ ಲಿಂಗಸೂಗೂರು ಅನುಷ್ಠಾನ ಸಂಸ್ಥೆಯ ವತಿಯಿಂದ ಗಣಿಗಾರಿಕೆ ಪ್ರಭಾವಕ್ಕೆ ಒಳಗಾದ ವಲಯಗಳಿಗೆ ಸಮಗ್ರ ಪರಿಸರ ಯೋಜನೆ (CEPMIZ) ಅಡಿ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹೊನ್ನಾಳಿ ತಾಂಡದಲ್ಲಿ ಗುರುವಾರ ಏರ್ಪಡಿಸಿದ್ದ ಸಮುದಾಯ ಸಹಭಾಗಿತ್ವ ಕಾರ್ಯಕ್ರಮ (ಪಿಆರ್‌ಎ) ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕ ದಯಾನಂದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಣಿಬಾಧಿತ ಪ್ರದೇಶದಲ್ಲಿ ನಾಶವಾಗಿರುವ ಮೇಲ್ಮಣ್ಣನ್ನು ಪುನರ್ ಸ್ಥಾಪಿಸಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮೂಲಕ ಮಣ್ಣಿನ ಫಲವತ್ತತೆಯನ್ನು ಪುನರುಜ್ಜೀವನಗೊಳಿಸಿ ವ್ಯವಸಾಯಕ್ಕೆ ಯೋಗ್ಯವನ್ನಾಗಿಸುವ ಮೂಲಕ ರೈತರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸುಸ್ಥಿರತೆಯನ್ನು ಪಡೆಯಲು ಈ ಯೋಜನೆ ಅನುಷ್ಠಾನವಾಗುತ್ತಿದೆ ಎಂದು ತಿಳಿಸಿದರು.
ಗ್ರಾಮ್ಸ್ ಸಂಸ್ಥೆಯ ಸಿಇಓ ಮಹೇಶ್ ಕುಮಾರ್ ಅವರು ಮಾತನಾಡಿ, ಯೋಜನಾ ವ್ಯಾಪ್ತಿಯ ಗ್ರಾಮಗಳ ರೈತರಿಗೆ ತಮ್ಮ ತಮ್ಮ ಜಮೀನುಗಳಲ್ಲಿ ಯಾವ ರೀತಿಯಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆಯನ್ನು ಮಾಡಿಕೊಳ್ಳಬೇಕು, ಸಂರಕ್ಷಣೆಯನ್ನು ಮಾಡಲು ಯಾವ ರೀತಿಯಾಗಿ ಉಪಚಾರಗಳನ್ನು ಮಾಡಬೇಕು ಎಂದು ತಿಳಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತೇರಿ ಸಂಸ್ಥೆಯ ವಿಜಯ ಮೇಟಿ, ಕ್ಷೇತ್ರದ ಜಿಲ್ಲಾ ತಂಡದ ನಾಯಕರಾದ ಅಶ್ವಿನಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಿರ್ಮಲ ಬಾಯಿ, ರಮೇಶ್ ನಾಯಕ್, ರವಿನಾಯಕ್, ಕೃಷಿ ಅಧಿಕಾರಿಗಳಾದ ಲೋಕರಾಜ್, ಬಸವರಾಜ್ ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.
ಜಾನೆಕುಂಟೆ-ವೇಣಿ ವೀರಾಪುರ ಯೋಜನೆಯ ತಂಡದ ನಾಯಕರಾದ ವೀಣಾ ಅವರು ಕಾರ್ಯಕ್ರಮ ನಿರೂಪಿಸಿದರು. ಹಲಕುಂದಿ ಬೆಳಗಲ್ಲು ಯೋಜನೆಯ ತಂಡದ ನಾಯಕರಾದ ಅಶ್ವಿನಿ ಅವರು ಸ್ವಾಗತ ಮತ್ತು ವಂದನಾರ್ಪಣೆ ನೆರವೇರಿಸಿದರು.