ಡಿಸೆಂಬರ್‌ನಲ್ಲಿ ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್
ಬಳ್ಳಾರಿ: ಬಳ್ಳಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಬರುವ ಡಿಸೆಂಬರ್ ತಿಂಗಳಲ್ಲಿ ಉದ್ಘಾಟನೆಗೊಳಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿರುವ ಸುಧಾಕ್ರಾಸ್ ಬಳಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವರು ಭೇಟಿ ನೀಡಿ, ಬಾಕಿ ಕಾಮಗಾರಿಗಳ ಪ್ರಗತಿಯ ಕುರಿತು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದರು.
450 ಹಾಸಿಗೆಗಳ ಆಸ್ಪತ್ರೆಯು 2008ರಲ್ಲಿ ಮಂಜೂರಾಗಿದ್ದು, ವಿವಿಧ ಕಾರಣಗಳಿಂದ ಕೆಲಸ ನಿಲ್ಲಿಸಬೇಕಾದ ಪರಿಸ್ಥಿತಿ ಉಂಟಾಗಿತ್ತು. ನಂತರ 2018ರಲ್ಲಿ ಮರು ಟೆಂಡರ್ ಕರೆಯಲಾಗಿತ್ತು. ಈಗ ನಮ್ಮ ಸರ್ಕಾರದ ಅವಧಿಯಲ್ಲಿಯೇ ಕಾಮಗಾರಿಯನ್ನು ಪೂರ್ಣಗೊಳಿಸಿ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಒಟ್ಟು 11,204 ಲಕ್ಷ ರೂ. ಮೊತ್ತದ ಹಂತ-1 ಕಾಮಗಾರಿಗಳು ಶೇ.97 ಪೂರ್ಣಗೊಂಡಿದ್ದು, 2,438 ಲಕ್ಷ ರೂ. ಮೊತ್ತದ ಹಂತ-2 ಕಾಮಗಾರಿಗಳು ಶೇ.96 ಮುಗಿದಿವೆ. ಉಳಿದ ಕಾಮಗಾರಿಗಳನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಕಾರ್ಡಿಯಾಲಜಿ, ಪ್ಲಾಸ್ಟಿಕ್ ಸರ್ಜರಿ, ಡಯಾಲಿಸಿಸ್ ಯಂತ್ರ, ಆರ್‌ಒ ಪ್ಲಾಂಟ್, ಬೆಡ್ ವ್ಯವಸ್ಥೆ ಸೇರಿದಂತೆ ಎಲ್ಲಾ ಉಪಕರಣ ಅಳವಡಿಕೆಯನ್ನು ತ್ವರಿತಗೊಳಿಸಿ ಜನರಿಗೆ ಆರೋಗ್ಯಸೇವೆ ನೀಡಲು ಸಿದ್ಧಗೊಳ್ಳಬೇಕು ಎಂದು ಸಚಿವರು ಹೇಳಿದರು.
ಹಾಗೇ ನ್ಯೂರಾಲಜಿ ಸೇರಿದಂತೆ ಖಾಲಿ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಕ್ರಮವಹಿಸಲು ನಿರ್ದೇಶಕರಿಗೆ ಸೂಚಿಸಿದರು. ಅನುದಾನದ ಕೊರತೆಯಿದ್ದರೆ ಡಿಎಂಎಫ್, ಕೆಎಂಇಆರ್‌ಸಿ ಮತ್ತು ಸಿಎಸ್‌ಆರ್ ನಿಧಿಗಳಿಂದ ಸಹಾಯ ಪಡೆಯಲು ಜಿಲ್ಲಾಧಿಕಾರಿಗೆ ಸೂಚಿಸಿದರು.
ಬಿಎಂಸಿಆರ್‌ಸಿ ನಿರ್ದೇಶಕ ಡಾ.ಗಂಗಾಧರ ಗೌಡ ಅವರು, ಕಳೆದ ಎರಡು ತಿಂಗಳಿಂದ ಹೊರರೋಗಿ ವಿಭಾಗ ಕಾರ್ಯನಿರ್ವಹಿಸುತ್ತಿದ್ದು, ಒಂದು ತಿಂಗಳಲ್ಲಿ ಒಳರೋಗಿ ವಿಭಾಗ ಆರಂಭಗೊಳ್ಳಲಿದೆ ಎಂದು ಹೇಳಿದರು.
ವಿದ್ಯುತ್ ಪೂರೈಕೆ, ಪರಿವರ್ತಕ ಅಳವಡಿಕೆ ಹಾಗೂ ಉಪಕರಣ ಪೂರೈಕೆ ಕಾರ್ಯಗಳು ಅಂತಿಮ ಹಂತದಲ್ಲಿದ್ದು, ನವೆಂಬರ್ ಅಂತ್ಯಕ್ಕೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಸಭೆಯಲ್ಲಿ ಬಿಎಂಸಿಆರ್‌ಸಿ ಮತ್ತು ಟಿಬಿ ಆಸ್ಪತ್ರೆಗಳಡಿ ಕೈಗೊಂಡ ಕಾಮಗಾರಿಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
26 ಎಕರೆ ಪ್ರದೇಶದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ :
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆವರಣದಲ್ಲಿನ 26 ಎಕರೆ ಪ್ರದೇಶದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧವಾಗಿದೆ. ಸಮಿತಿಯಿಂದ ಅನುಮೋದನೆ ದೊರೆತ ಬಳಿಕ ಟೆಂಡರ್ ಆಹ್ವಾನಿಸಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಸಚಿವರು ಮಾಧ್ಯಮದವರಿಗೆ ತಿಳಿಸಿದರು.
ಬಳಿಕ ಅವರು ಆಸ್ಪತ್ರೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು.
ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮುಸೇನ್, ನಿರ್ದೇಶಕಿ ಸುಜಾತಾ ರಾಠೋಡ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್, ಜಿಪಂ ಸಿಇಒ ಮುಹಮ್ಮದ್ ಹ್ಯಾರೀಸ್ ಸುಮೇರ್ ಸೇರಿದಂತೆ ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.