×
Ad

ಬಳ್ಳಾರಿ: ಪಿಎಂಎಫ್‌ಎಂಇ ಯೋಜನೆಯ ಜಿಲ್ಲಾ ಮಟ್ಟದ ಅರಿವು ಕಾರ್ಯಗಾರ

Update: 2025-08-13 23:03 IST

ಬಳ್ಳಾರಿ: ಪಿಎಂಎಫ್‌ಎಂಇ ಯೋಜನೆಯಡಿ ಕಿರು ಆಹಾರ ಸಂಸ್ಕಾರಣಾ ಉದ್ಯಮ ಪ್ರಾರಂಭಿಸಲು ಇಚ್ಛಿಸಿದಲ್ಲಿ ಫಲಾನುಭವಿಯು ಕೇವಲ 1 ಲಕ್ಷ ಬಂಡವಾಳ ಹೂಡಿದರೆ 10 ಲಕ್ಷ ಬಂಡವಾಳವುಳ್ಳ ಉದ್ಯಮ ಆರಂಭಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ಹೇಳಿದರು.

ಕೃಷಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕೆಪೆಕ್ ಸಂಸ್ಥೆಯ ಸಹಯೋಗದೊಂದಿಗೆ ನಗರದ ಜಿಪಂ ನಜೀರ್ ಸಾಬ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ನಿಯಮಬದ್ದಗೊಳಿಸುವಿಕೆ ಯೋಜನೆಯ ಜಿಲ್ಲಾ ಮಟ್ಟದ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಿರು ಆಹಾರ ಸಂಸ್ಕರಣಾ ಉದ್ಯಮ ಪ್ರಾರಂಭಿಸಲು 9 ಲಕ್ಷಗಳಷ್ಟು ಬ್ಯಾಂಕಿನ ಸಾಲ ದೊರೆಯುತ್ತದೆ. ಇದರಲ್ಲಿ 5 ಲಕ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಹಾಯಧನ ದೊರೆಯುತ್ತದೆ. ಕೇವಲ 1 ಲಕ್ಷ ಹೂಡಿ 10 ಲಕ್ಷ ಬಂಡವಾಳದ ಉದ್ಯಮ ಪ್ರಾರಂಭಿಸಲು ಇದು ಸುವರ್ಣ ಅವಕಾಶವಾಗಿದ್ದು, ದೊಡ್ಡ ಕನಸಿಗೆ ಚಿಕ್ಕ ಹೆಜ್ಜೆಯಾಗಿ ಅಡಿಗಲ್ಲು ಹಾಕಲು ಸಾಧ್ಯವಾಗುವುದರಿಂದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್ ಅವರು ಮಾತನಾಡಿ, ಪಿಎಂಎಫ್‌ಎಂಇ ಯೋಜನೆಯಡಿ ಆಹಾರ ಸಂಸ್ಕರಣೆಗೆ ಒತ್ತು ಕೊಡುವುದರಿಂದ ಮಹಿಳೆಯರು ತಮ್ಮ ಮನೆಯಿಂದಲೇ ಆಹಾರ ಸಂಸ್ಕರಣಾ ಪದಾರ್ಥಗಳಾದ ಜೋಳದ ರೊಟ್ಟಿ, ಚಕ್ಕುಲಿ, ಕಾರ, ಹಪ್ಪಳ, ಸಂಡಿಗೆ ಮತ್ತು ಇತರ ಪದಾರ್ಥಗಳನ್ನು ಆಹಾರ ಸಂಸ್ಕರಣೆ ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಮಾತನಾಡಿ, ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡಲ್ಲಿ ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳಬಹುದು. ಈ ಯೋಜನೆಯು ಕೇವಲ ಈ ಒಂದು ವರ್ಷ ಮಾತ್ರ ಅನುಷ್ಠಾನದಲ್ಲಿರುವುದರಿಂದ ರೈತರು ಮತ್ತು ರೈತ ಮಹಿಳೆಯರು ಹಾಗೂ ನಿರುದ್ಯೋಗಿ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ಗಿರೀಶ್ ಕುಲಕರ್ಣಿ ಅವರು, ಫಲಾನುಭವಿಗಳು ಸಾಲ ಪಡೆಯಲು ಬ್ಯಾಂಕಿಗೆ ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.

ಕೆಪೆಕ್ ಸಂಸ್ಥೆಯ ಸಹಾಯಕ ನಿರ್ದೇಶಕ ಚಂದ್ರು ಕುಮಾರ್, ಯೋಜನೆಯ ಪ್ರಗತಿ ಮತ್ತು ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು. ಕೆಪೆಕ್ ಸಂಸ್ಥೆಯ ಪ್ರಕಾಶ್ ನಾಯಕ ಮತ್ತು ವಿಘ್ನೇಶ್ ಯೋಜನೆಯ ರೂಪರೇಷೆ ಮತ್ತು ಅರ್ಜಿ ಸಲ್ಲಿಕೆಯ ಅರ್ಹತೆ ಹಾಗೂ ವಿಧಾನ ತಿಳಿಸಿಕೊಟ್ಟರು.

ಕಾರ್ಯಾಗಾರದಲ್ಲಿ ಉಪ ಕೃಷಿ ನಿರ್ದೇಶಕ ಮಂಜುನಾಥ್, ವಿವಿಧ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರಾದ ಮಹ್ಮದ್ ರಫೀ, ಗರ್ಜಪ್ಪ, ಎಸ್.ಬಿ.ಪಾಟೀಲ್, ನಾಜನೀನ್ ನಾದಪ್ ಸೇರಿದಂತೆ ಕೃಷಿ ಸಂಬAಧಿತ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಎನ್‌ಅರ್‌ಎಲ್‌ಎಂ ಕೋಷದ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು, ಸಾರ್ವಜನಿಕರು, ಇನ್ನೀತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News