ಬಳ್ಳಾರಿಯಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ ಪ್ರಕ್ರಿಯೆ ಆರಂಭ
ಬಳ್ಳಾರಿ: ಜಿಲ್ಲೆಯಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ ಕಾರ್ಯವನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಕೈಗೊಳ್ಳಲಾಗಿದ್ದು, ಅರ್ಹ ದೇವದಾಸಿ ಮಹಿಳೆಯರು ನಿಗದಿತ ನಮೂನೆಗಳಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಭಾಗವಹಿಸಲು ಬಯಸುವ ಮಹಿಳೆಯರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ನಮೂನೆ-1, 2, 3 ಪಡೆದು ಭರ್ತಿ ಮಾಡಿ ಸಲ್ಲಿಸಬೇಕಾಗಿದೆ.
ಕರ್ನಾಟಕ ಸರ್ಕಾರವು 1982ರಲ್ಲಿ ಜಾರಿಗೊಳಿಸಿದ ಕರ್ನಾಟಕ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆಗೆ 1984ರ ಜನವರಿ 11ರಂದು ರಾಷ್ಟ್ರಪತಿಯ ಅಂಕಿತ ದೊರೆತಿದ್ದು, ಅದೇ ವರ್ಷದ ಜನವರಿ 31ರಂದು ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಗೊಂಡಿದೆ. ಈ ಕಾಯ್ದೆಯನ್ವಯ 1984ರ ಜನವರಿ 11ರ ಮುಂಚೆ ಜನಿಸಿದ ಮಹಿಳೆಯರ ಅರ್ಜಿಗಳು ಮಾತ್ರ ಪರಿಗಣಿಸಲ್ಪಡಲಿವೆ. ಆ ದಿನಾಂಕದ ನಂತರ ಜನಿಸಿದ ಮಹಿಳೆಯರಿಂದ ಅರ್ಜಿಗಳು ಬಂದಲ್ಲಿ, ಪ್ರಕರಣ ದಾಖಲಿಸಿ ಸಂಬಂಧಿತ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಾನೂನು ಕ್ರಮಕ್ಕೆ ಹೊಣೆಗಾರರಾಗಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅರ್ಜಿಗಳನ್ನು ಪರಿಶೀಲಿಸಿದ ಬಳಿಕ ತಾಲ್ಲೂಕು ಯೋಜನಾ ಅನುಷ್ಠಾನಾಧಿಕಾರಿಗಳು, ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಸಂಬಂಧಿತ ವಲಯ ಮೇಲ್ವಿಚಾರಕಿಯರ ಜಂಟಿ ತನಿಖಾ ವರದಿಯೊಂದಿಗೆ ತಾಲ್ಲೂಕು ಮಟ್ಟದ ಸಮಿತಿಗೆ ಮಂಡಿಸಬೇಕು. ಸಮಿತಿಯಲ್ಲಿ ಅನುಮೋದನೆ ಅಥವಾ ತಿರಸ್ಕಾರದ ನಿರ್ಣಯ ಕೈಗೊಂಡು, ಸಭಾ ನಡವಳಿಗಳೊಂದಿಗೆ ಎಲ್ಲಾ ದಾಖಲೆಗಳನ್ನು ದೃಢೀಕರಿಸಿ ಜಿಲ್ಲಾ ಮಟ್ಟದ ಸಮಿತಿಗೆ ಸಲ್ಲಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.