×
Ad

ಬೆಂಗಳೂರು | 26ರ ಯುವತಿಯೊಂದಿಗೆ 52 ವರ್ಷದ ವ್ಯಕ್ತಿ ʼಲಿವಿಂಗ್ ಟುಗೆದರ್ʼ : ಪೆಟ್ರೋಲ್ ಸುರಿದು ಯುವತಿಯ ಸಜೀವ ದಹನಗೈದ ಆರೋಪಿ

Update: 2025-09-01 19:05 IST
ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು, ಸೆ.1 : 52 ವಯಸ್ಸಿನ ವ್ಯಕ್ತಿಯೊಬ್ಬ ತನ್ನೊಂದಿಗೆ ಲಿವಿಂಗ್ ಟುಗೆದರ್‌ ನಲ್ಲಿದ್ದ 26 ವರ್ಷದ ಯುವತಿಯ ಮೇಲೆ ಪೆಟ್ರೋಲ್ ಸುರಿದು ಸಜೀವವಾಗಿ ಸುಟ್ಟು ಹಾಕಿರುವ ಘಟನೆ ಆನೇಕಲ್ ಬಳಿ ವರದಿಯಾಗಿದೆ.

ಈ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮೃತ ಯುವತಿಯನ್ನು ವನಜಾಕ್ಷಿ ಎಂದು ಗುರುತಿಸಲಾಗಿದೆ. ಆರೋಪಿ ವಿಠ್ಠಲ ಎಂಬುವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇವರಿಬ್ಬರೂ ಆನೇಕಲ್ ಬಳಿಯ ಮಳೇನಲ್ಲಸಂದ್ರ ಗ್ರಾಮದ ನಿವಾಸಿಗಳಾಗಿದ್ದಾರೆ. ಆರೋಪಿ ವಿಠ್ಠಲನಿಗೆ ಈಗಾಗಲೇ ಎರಡು ಮದುವೆಯಾಗಿದೆ. ಮೊದಲ ಪತ್ನಿ ಮೃತಪಟ್ಟಿದ್ದು ನಂತರ ಮತ್ತೊಂದು ಮದುವೆಯಾಗಿದ್ದ. ಎರಡನೇ ಪತ್ನಿ ಬೇರೊಬ್ಬನ ಜೊತೆ ಪರಾರಿಯಾಗಿದ್ದಳು ಎನ್ನಲಾಗಿದೆ. ಅತ್ತ ವನಜಾಕ್ಷಿಗೂ ಮದುವೆಯಾಗಿದ್ದು, ಗಂಡ ಮೃತಪಟ್ಟಿದ್ದ. ಈ ನಡುವೆ ವಿಠ್ಠಲ, ವನಜಾಕ್ಷಿಯ ಪರಿಚಯ ಬೆಳೆಸಿದ್ದ. ಮೂರ್ನಾಲ್ಕು ವರ್ಷಗಳಿಂದ ವನಜಾಕ್ಷಿ ಜೊತೆ ಲಿವಿಂಗ್ ಟುಗೆದರ್‌ ನಲ್ಲಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೆಲವು ದಿನಗಳಿಂದ ವನಜಾಕ್ಷಿ ಆತನನ್ನು ಕಡೆಗಣಿಸುತ್ತಿದ್ದಳು. ಅಲ್ಲದೆ, ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿಯ ಜೊತೆ ಸಲುಗೆ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ. ಕಳೆದೊಂದು ತಿಂಗಳಿನಿಂದ ಇದೇ ವಿಚಾರಕ್ಕೆ ವಿಠ್ಠಲ ಹಾಗೂ ವನಜಾಕ್ಷಿ ನಡುವೆ ಗಲಾಟೆ ನಡೆಯುತ್ತಿತ್ತು. ಆ.30ರ ಶನಿವಾರ ವನಜಾಕ್ಷಿ ತನ್ನ ಸ್ನೇಹಿತನ ಜೊತೆ ಬನ್ನೇರುಘಟ್ಟದಿಂದ ಬಸವನಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದಳು. ಇದನ್ನು ನೋಡಿದ ವಿಠ್ಠಲ, ಹುಳಿಮಾವು ಠಾಣೆ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ಕಾರನ್ನು ಹಿಂಬಾಲಿಸಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.

ವನಜಾಕ್ಷಿ ಕುಳಿತಿದ್ದ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದ ಆರೋಪಿ ವಿಠ್ಠಲ, ಐದು ಲೀಟರ್ ಪೆಟ್ರೋಲ್ ಅನ್ನು ಕಾರಿನ ಮೇಲೆ ಸುರಿಯಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಸ್ನೇಹಿತನ ಜೊತೆ ಕಾರಿನಿಂದ ಇಳಿದ ವನಜಾಕ್ಷಿ ಓಡಿ ಹೋಗಲು ಶುರು ಮಾಡಿದ್ದಾರೆ. ಇಬ್ಬರನ್ನೂ ಮತ್ತೆ ಹಿಂಬಾಲಿಸಿಕೊಂಡು ಹೋಗಿದ್ದ ವಿಠ್ಠಲ, ಆ ಬಳಿಕ ವನಜಾಕ್ಷಿ ಮೇಲೆ ಪೆಟ್ರೋಲ್ ಎರಚಿ ಲೈಟರ್‍ನಿಂದ ಬೆಂಕಿ ಹಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವನಜಾಕ್ಷಿಯನ್ನು ತಕ್ಷಣಕ್ಕೆ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ.60ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆಕೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News