ಬೆಂಗಳೂರು: ಎಟಿಎಂ ಹಣ ದರೋಡೆ ಪ್ರಕರಣದ ಸೂತ್ರಧಾರ ಪೊಲೀಸ್ ಕಾನ್‍ಸ್ಟೇಬಲ್ ಅಮಾನತು
ಎಲ್ಲ ಠಾಣೆಯ ಸಿಬ್ಬಂದಿಗಳ ಮೇಲ್ವಿಚಾರಣೆಗೆ ಆಯುಕ್ತರ ಸೂಚನೆ
ಕಾನ್‍ಸ್ಟೇಬಲ್ ಅಣ್ಣಪ್ಪ ನಾಯ್ಕ್
ಬೆಂಗಳೂರು: ಎಟಿಎಂ ಹಣ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವ ಗೋವಿಂದಪುರ ಠಾಣೆ ಪೊಲೀಸ್ ಕಾನ್‍ಸ್ಟೇಬಲ್ ಅಣ್ಣಪ್ಪ ನಾಯ್ಕ್ ನನ್ನು ಸೇವೆಯಿಂದ ಅಮಾನತುಗೊಳಿಸಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಬಿ.ದೇವರಾಜ್ ರವಿವಾರ ಆದೇಶ ಹೊರಡಿಸಿದ್ದಾರೆ.
ಪ್ರಕರಣದಲ್ಲಿ ಶಾಮೀಲಾಗಿ ದರೋಡೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಅಣ್ಣಪ್ಪ ನಾಯ್ಕ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಪ್ರಕರಣದಲ್ಲಿ ಕಾನ್‍ಸ್ಟೇಬಲ್ ಅಣ್ಣಪ್ಪ ನಾಯ್ಕ್ ಆರೋಪಿಗಳಿಗೆ ಸಾಥ್ ನೀಡಿದ್ದ. ಈತನೇ ಇಡೀ ಕೃತ್ಯದ ಸೂತ್ರಧಾರ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿತ್ತು.
ಇನ್ನು, ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಬೀಟ್ ಸಿಬ್ಬಂದಿಯಾಗಿ ಅಣ್ಣಪ್ಪ ನಾಯ್ಕ್ ಕೆಲಸ ಮಾಡುತ್ತಿದ್ದ. ಈ ಹಿಂದೆ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪನನ್ನು ಅಲ್ಲಿಂದ ತೆಗೆದು ಬೀಟ್ ಕೆಲಸಕ್ಕೆ ಹಾಕಲಾಗಿತ್ತು.
ಎಲ್ಲ ಠಾಣೆಯ ಸಿಬ್ಬಂದಿಗಳ ಮೇಲ್ವಿಚಾರಣೆಗೆ ಆಯುಕ್ತರ ಸೂಚನೆ:
ದರೋಡೆ ಪ್ರಕರಣದಲ್ಲಿ ಕಾನ್‍ಸ್ಟೇಬಲ್ ಭಾಗಿ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಬೆಂಗಳೂರಿನ ಎಲ್ಲ ಪೊಲೀಸ್ ಠಾಣೆಗಳ ಪಿಎಸ್ಸೈ, ಎಎಸ್ಸೈ, ಹೆಡ್ ಕಾನ್‍ಸ್ಟೇಬಲ್ ಹಾಗೂ ಕಾನ್‍ಸ್ಟೇಬಲ್‍ಗಳ ಮೇಲ್ವಿಚಾರಣೆ ನಡೆಸಿ ವರದಿ ನೀಡುವಂತೆ ಆಯಾ ವಿಭಾಗದ ಡಿಸಿಪಿ ಮತ್ತು ಎಸಿಪಿಗಳಿಗೆ ಸೂಚನೆ ನೀಡಿದ್ದಾರೆ.