ಬೆಂಗಳೂರು | ಮಾದಕ ವಸ್ತು ಮಾರಾಟ ಪ್ರಕರಣ: ನೈಜೀರಿಯನ್ ಪ್ರಜೆ ಬಂಧನ, 2.30 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಕ್ಕೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ. 2 : ವ್ಯವಹಾರದ ವೀಸಾದಡಿ ಭಾರತಕ್ಕೆ ಬಂದು ಮಾದಕ ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದ ಪ್ರಕರಣದಡಿ ನೈಜೀರಿಯನ್ ಪ್ರಜೆಯನ್ನು ಇಲ್ಲಿನ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಕೋಜಿ ಹೇಡಾಹಾ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 2.30 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಬಾಗಲೂರಿನ ಸಂತೆ ಸರ್ಕಲ್- ಸಿಎಂಆರ್ ಕಾಲೇಜ್ ನಡುವಿನ ಮಾರ್ಗದಲ್ಲಿ ಮಾದಕ ಪದಾರ್ಥಗಳ ಮಾರಾಟದಲ್ಲಿ ತೊಡಗಿದ್ದಾಗ ಆರೋಪಿಯನ್ನು ಬಂಧಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
2011ರಲ್ಲಿ ವ್ಯವಹಾರಿಕ ವೀಸಾ ಪಡೆದು ಭಾರತಕ್ಕೆ ಬಂದಿದ್ದ ಆರೋಪಿ, ನಂತರ ಅಗತ್ಯ ದಾಖಲೆಗಳು ಅಂತ್ಯವಾದ ಬಳಿಕವೂ ಅಕ್ರಮವಾಗಿ ಭಾರತದಲ್ಲಿ ವಾಸವಿದ್ದ. ಅಪರಿಚಿತ ವ್ಯಕ್ತಿಯೋರ್ವನಿಂದ ಎಂಡಿಎಂಎ ಖರೀದಿಸುತ್ತಿದ್ದ ಈತ, ನಗರದ ಹೊರವಲಯದಲ್ಲಿರುವ ಕಾಲೇಜುಗಳ ಸಮೀಪ ಮಾರಾಟ ಮಾಡುತಿದ್ದ. ಈ ಹಿಂದೆಯೂ ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆದರೆ, ಜೈಲಿನಿಂದ ಹೊರಬಂದ ಬಳಿಕ ಮತ್ತದೇ ಕೃತ್ಯ ಮುಂದುವರೆಸಿದ್ದ ಎಂದು ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.