×
Ad

ಬಿಟ್ ಕಾಯಿನ್ ಹಗರಣ ಮರು ತನಿಖೆ ಖಚಿತ: ಗೃಹ ಸಚಿವ ಡಾ.ಜಿ.ಪರಮೇಶ್ವರ್

Update: 2023-06-27 18:39 IST

ಬೆಂಗಳೂರು, ಜೂ.26: ಹಿಂದಿನ ಸರಕಾರದ ಅವಧಿಯಲ್ಲಿ ನಡೆದಿದ್ದ ಬಹುಕೋಟಿ ಬಿಟ್ ಕಾಯಿನ್ ಹಗರಣ ಬಗ್ಗೆ ಖಚಿತವಾಗಿ ಮರು ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮರು ತನಿಖೆ ಮಾಡುತ್ತೇವೆ. ಆದರೆ, ಈ ತನಿಖೆಯ ಹೊಣೆಯನ್ನು ಸಿಐಡಿಗೆ ನೀಡಬೇಕೋ ಅಥವಾ ಬೇರೆ ತನಿಖಾ ಸಂಸ್ಥೆಗೆ ಕೊಡಬೇಕಾ ಎಂಬುದನ್ನು ನಿರ್ಧರಿಸುತ್ತೇವೆ. ಮತ್ತೊಂದೆಡೆ ಸದ್ಯ ಸಿಐಡಿ ಪ್ರಬಲವಾಗಿದೆ. ಹೀಗಾಗಿ, ಬೇರೆ ಬೇರೆ ಏಜೆನ್ಸಿಗಳ ಸಹಕಾರವನ್ನು ಸಿಐಡಿಗೆ ಕೊಡಿಸಲಾಗುವುದು ಎಂದರು.

ಹಿಂದಿನ ಸರಕಾರ ಬಿಟ್ ಕಾಯಿನ್ ತನಿಖೆಯನ್ನು ಮುಕ್ತಾಯಗೊಳಿಸಿದೆ ಎಂದ ಅವರು, ಈಗಾಗಲೇ ಎರಡು ಬಾರಿ ಬಿಟ್ ಕಾಯಿನ್ ಹಗರಣ ಸಂಬಂಧ ಸಭೆ ಮಾಡಿದ್ದೇನೆ. ತಾಂತ್ರಿಕವಾಗಿ ಯಾರಿಗೆಲ್ಲ ಹಣ ಹೋಗಿದೆ. ಕಾನೂನು ಬಾಹಿರವಾಗಿ ಸಾವಿರಾರು ಕೋಟಿ ಹಣ ವರ್ಗಾವಣೆಯಾಗಿದೆ ಎನ್ನುವುದು ನೋಡಬೇಕಾಗಿದೆ. ಕೆಲವೊಂದು ಮಾಹಿತಿ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಹಗರಣದ ಬಗ್ಗೆ ಬೆಳಕು ಚೆಲ್ಲುತ್ತೇವೆ ಎಂದು ಅವರು ಹೇಳಿದರು.

ಸುಳ್ಳು ಸುದ್ದಿ ಹರಡದಂತೆ ಕ್ರಮ ಕೈಗೊಳ್ಳಲು ಸರಕಾರ ನಿರ್ಧಾರ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಇನ್ನೂ, ಪಿಎಸ್ಸೈ ಪರೀಕ್ಷೆ ಅಕ್ರಮ ಪ್ರಕರಣದ ವಿಚಾರಣೆ ನ್ಯಾಯಾಲಯದ ಹಂತದಲ್ಲಿದ್ದು, ಅಂತಿಮ ತೀರ್ಪು ಬಳಿಕ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಪರಮೇಶ್ವರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News