ಬಿಎಂಟಿಸಿ ಬಸ್ ಅಡ್ಡಗಟ್ಟಿ ಸಿಬ್ಬಂದಿ ಮೇಲೆ ಹಲ್ಲೆ: ಓರ್ವನ ಬಂಧನ, ಮೂವರಿಗೆ ಶೋಧ
Update: 2025-09-04 23:50 IST
ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್ ಅಡ್ಡಗಟ್ಟಿ ಸಿಬ್ಬಂದಿಗಳ ಮೇಲೆ ಹಲ್ಲೆಗೈದ ಪ್ರಕರಣ ಸಂಬಂಧ ಬನಶಂಕರಿ ಠಾಣಾ ಪೊಲೀಸರು ಓರ್ವ ಯುವಕನನ್ನು ಬಂಧಿಸಿ, ಉಳಿದ ಮೂವರಿಗೆ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಚಾಲಕ ಹುಚ್ಚಿರಪ್ಪ ಮತ್ತು ನಿರ್ವಾಹಕ ಪ್ರಕಾಶ್ ಎಂಬವರು ಹಲ್ಲೆಗೊಳಗಾಗಿದ್ದಾರೆ. ಬಿಎಂಟಿಸಿ ಭದ್ರತೆ ಮತ್ತು ಜಾಗೃತಾ ವಿಭಾಗದ ನಿರ್ದೇಶಕ ಅಬ್ದುಲ್ ಅಹದ್ ನೀಡಿದ ದೂರಿನನ್ವಯ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು ಉಳಿದವರಿಗೆ ಹುಡುಕಾಟ ನಡೆಸಿದ್ದಾರೆ.
ಸೆ.4ರ ಮಧ್ಯಾಹ್ನ ಸುಮಾರು 12.20ಕ್ಕೆ ಸಾರಿಗೆ ಘಟಕ–33ಕ್ಕೆ ಸೇರಿದ ಕೆಎ-57 ಎಫ್ 0173 ಸಂಖ್ಯೆಯ ಬಿಎಂಟಿಸಿ ಬಸ್ ಸಂಚರಿಸುತ್ತಿದ್ದ ವೇಳೆ ಕದಿರೇನಹಳ್ಳಿ ಕ್ರಾಸ್ ಬಳಿ ದ್ವಿಚಕ್ರ ವಾಹನದಿಂದ ಬಂದ ನಾಲ್ವರು ಆರೋಪಿಗಳು ಬಸ್ಸನ್ನು ಅಡ್ಡಗಟ್ಟಿ ಯಾವುದೇ ನಿಖರ ಕಾರಣವಿಲ್ಲದೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.