‘ವಿಕ್ಟೋರಿಯಾ ಆಸ್ಪತ್ರೆ’ಯ ವಾಸ್ತವಾಂಶದ ವರದಿ ನೀಡಲು ಇಲಾಖೆಗೆ ಪತ್ರ; ‘ವಾರ್ತಾಭಾರತಿ’ ವಿಶೇಷ ವರದಿ ಬೆನ್ನಲ್ಲೇ ಕ್ರಮ
ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಕಾರ್ಯವೈಖರಿ, ನಿರ್ವಹಣೆಗೆ ಸಂಬಂಧಿಸಿದಂತೆ ಪರಿಶೀಲಿಸಿ ಜಿಪಿಎಸ್ ಛಾಯಾಚಿತ್ರಗಳೊಂದಿಗೆ ಸರಕಾರಕ್ಕೆ ಅನುಪಾಲನಾ ವರದಿಯನ್ನು ನೀಡಬೇಕೆಂದು ಸಿಎಂ ಸಚಿವಾಲಯದಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಶುಕ್ರವಾರ ಪತ್ರ ಬರೆಯಲಾಗಿದೆ.
ಈ ಬಗ್ಗೆ ನ.27ರ ಗುರುವಾರದಂದು ‘ವಾರ್ತಾಭಾರತಿ’ ದಿನಪತ್ರಿಕೆಯಲ್ಲಿ ‘ವಿಕ್ಟೋರಿಯಾ ಎಂಬ ಅವ್ಯವಸ್ಥೆಯುಳ್ಳ ಸರಕಾರಿ ಆಸ್ಪತ್ರೆ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರಕಾರ, ಇಲಾಖೆಗೆ ಪತ್ರ ಬರೆದು ವಾಸ್ತವಾಂಶದ ಕುರಿತು ಆದ್ಯತೆಯ ಮೇರೆಗೆ ಪರಿಶೀಲಿಸಿ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.
ಸರಕಾರದ ಪತ್ರಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿರುವ ವಿಕ್ಟೋರಿಯಾ ಆಸ್ಪತ್ರೆಯ ಆಡಳಿತ ಮಂಡಳಿ, ‘ಆಸ್ಪತ್ರೆಯ ಪ್ರತಿ ಸಭೆಯಲ್ಲಿಯೂ ರೋಗಿಗಳ ಜೊತೆಗೆ ಸೌಜನ್ಯದಿಂದ ನಡೆದುಕೊಳ್ಳಲು ಕಟ್ಟುನಿಟ್ಟಾಗಿ ತಿಳಿಸಲಾಗಿದೆ ಹಾಗೂ ಮೇಲ್ವಿಚಾರಕರಿಗೂ ಸಿಬ್ಬಂದಿಯ ನಡತೆಯನ್ನು ಸೌಜನ್ಯದಿಂದ ನಡೆದುಕೊಳ್ಳಲು ತಿಳಿಸಲಾಗಿದೆ. ಒಂದು ವೇಳೆ ರೋಗಿಗಳಿಂದ ಯಾರಾದರೂ ಸಿಬ್ಬಂದಿಗಳಿಗೆ ದೂರುಗಳು ಬಂದಲ್ಲಿ ತಪ್ಪಿತಸ್ಥ ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪತ್ರದಲ್ಲಿ ಉತ್ತರಿಸಿದೆ.