ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ: 19 ಮೊಬೈಲ್, 16 ಸಿಮ್ ಕಾರ್ಡ್, 15,800 ರೂ.ನಗದು ಪತ್ತೆ
ಪ್ರತ್ಯೇಕ 2 ಪ್ರಕರಣ ದಾಖಲು
ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಇತ್ತೀಚೆಗೆ ಕೈದಿಗಳ ಮೊಬೈಲ್ ಬಳಕೆ ವಿಡಿಯೋ ವೈರಲ್ ಬೆನ್ನಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು, ಜೈಲಿನಲ್ಲಿ ತಪಾಸಣೆ ನಡೆಸಿ ಸಜಾಬಂಧಿಗಳು ಅಕ್ರಮವಾಗಿ ಬಳಸುತ್ತಿದ್ದ ವಿವಿಧ ಕಂಪೆನಿಗಳ 19 ಮೊಬೈಲ್‍ಗಳನ್ನು ಪತ್ತೆಹಚ್ಚಿದ್ದಾರೆ.
ಜೈಲಿನಲ್ಲಿ ಅಕ್ರಮ ತಡೆಗಟ್ಟಲು ಹಾಗೂ ಸುಧಾರಣೆ ತರಲು ಮೊದಲ ಬಾರಿಗೆ ರಾಜ್ಯ ಸರಕಾರ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅವರನ್ನು ನಿಯೋಜಿಸಿತ್ತು. ಇವರ ನೇತೃತ್ವದಲ್ಲಿ ಇತ್ತೀಚೆಗೆ ದಾಳಿ ನಡೆಸಿರುವ ತಂಡವು ಸಜಾಬಂಧಿಗಳು ಬಳಸುತ್ತಿದ್ದ ಒಟ್ಟು 19 ಮೊಬೈಲ್‍ಗಳು, 16 ಸಿಮ್ ಕಾರ್ಡ್‍ಗಳು, 4 ಚಾರ್ಜರ್ ವೈರ್ ಗಳು, 3 ಇಯರ್ ಬಡ್ಸ್ ಗಳು ಹಾಗೂ 15,800 ರೂಪಾಯಿ ನಗದು ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಸಜಾಬಂಧಿಗಳಾದ ಸಾಗರ್ ಯಾನೆ ರಕೀಬುಲ್ಲಾ, ಮುನಿರಾಜು ಸೇರಿದಂತೆ ಇನ್ನಿತರ ಬಂಧಿಗಳ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಅಧಿನಿಯಮದ ಕಲಂ 22 ಹಾಗೂ ಇತರೆ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಲೆದಿಂಬು, ಶೌಚಾಲಯದ ಗೋಡೆಯೊಳಗೆ ಮೊಬೈಲ್ ಪತ್ತೆ: ಕಾರಾಗೃಹದಲ್ಲಿ ಮೊಬೈಲ್ ಬಳಕೆ ಸಂಬಂಧ ನ.26ರಂದು ಮಧ್ಯರಾತ್ರಿ 12.50ರಿಂದ 1.25ರವರೆಗೆ ಅಧಿಕಾರಿ ಹಾಗೂ ಸಿಬ್ಬಂದಿ ತಪಾಸಣೆ ನಡೆಸಿದಾಗ ಜೈಲಿನ ಬ್ಯಾರಕ್‍ಗಳ ವಿವಿಧ ಕೊಠಡಿಯಲ್ಲಿ 15 ಮೊಬೈಲ್‍ಗಳು ಹಾಗೂ 11 ಸಿಮ್ ಕಾರ್ಡ್‍ಗಳು ಸೇರಿದಂತೆ ಇನ್ನಿತರ ನಿಷೇಧಿತ ವಸ್ತುಗಳ ಪತ್ತೆಯಾಗಿದ್ದವು. ಸಜಾಬಂಧಿ ಸಾಗರ್ ಎಂಬುವನ ಹಾಸಿಗೆಯಲ್ಲಿ ಒನ್ ಪ್ಲಸ್ ಕಂಪೆನಿಯ ಒಂದು ಮೊಬೈಲ್ ಹಾಗೂ ಸಿಮ್ ಕಾರ್ಡ್ ಹಾಗೂ ಮತ್ತೋರ್ವ ಸಜಾಬಂಧಿ ಮುನಿರಾಜು ಬಳಸುತ್ತಿದ್ದ ತಲೆದಿಂಬಿನಲ್ಲಿ ರೆಡ್ ಮಿ ಕಂಪೆನಿಯ ಒಂದು ಮೊಬೈಲ್ ಹಾಗೂ ಸಿಮ್ ಕಾರ್ಡ್ ದೊರಕಿತ್ತು. 5ನೇ ಬ್ಯಾರಕ್‍ನ ಶೌಚಾಲಯಕ್ಕೆ ತೆರಳುವ ಕಮಾನುಗಳ ಮೇಲೆ 2 ಚಾರ್ಜರ್ ವೈರ್ ಹಾಗೂ ಒಂದು ಇಯರ್ ಬರ್ಡ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಅಧಿಕಾರಿಗಳ ಮತ್ತೊಂದು ತಂಡವು ನ.26ರಂದು ಬೆಳಗ್ಗೆ ಜಾವ 7.20 ರಿಂದ 7.50 ರವರೆಗೆ ನಡೆಸಿದ ತಪಾಸಣೆ ವೇಳೆ 4 ಮೊಬೈಲ್, 5 ಸಿಮ್ ಕಾರ್ಡ್‍ಗಳು ಹಾಗೂ 15,800 ರೂಪಾಯಿ ನಗದು ಪತ್ತೆಯಾಗಿದೆ. ನಿಷೇಧಿತ ವಸ್ತುಗಳನ್ನು ಜೈಲಿಗೆ ಸಾಗಿಸಿದವರು, ಇದಕ್ಕೆ ನೆರವು ನೀಡಿದವರು ಅಂತಿಮವಾಗಿ ಮೊಬೈಲ್ ಬಳಸುತ್ತಿದ್ದ ಕೈದಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೈಲಾಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.