"ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ" : ‘ನಾಯಕತ್ವ ಬದಲಾವಣೆ’ ಚರ್ಚೆ ಮಧ್ಯೆ ಕುತೂಹಲ ಮೂಡಿಸಿದ ಡಿಕೆ ಶಿವಕುಮಾರ್ ಪೋಸ್ಟ್
ಡಿ.ಕೆ.ಶಿವಕುಮಾರ್
ಬೆಂಗಳೂರು : ಕರ್ನಾಟಕದಲ್ಲಿ ‘ನಾಯಕತ್ವ ಬದಲಾವಣೆ’ ಹಾಗೂ ಸಂಪುಟ ಪುನಾರಚನೆ ಚರ್ಚೆ ಮುಂದುವರಿದ ಮಧ್ಯೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು "ಕೊಟ್ಟ ಮಾತು ಉಳಿಸಿಕೊಳ್ಳುವುದೇ ದೊಡ್ಡ ಶಕ್ತಿ" ಎಂದು ಹೇಳಿಕೊಂಡಿದ್ದು, ಕುತೂಹಲ ಮೂಡಿಸಿದೆ.
ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್, "ವರ್ಡ್ ಪವರ್ ಈಸ್ ವರ್ಲ್ಡ್ ಪವರ್̧ ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಅಥವಾ ನಾನೂ ಸೇರಿದಂತೆ ಬೇರೆ ಯಾರೇ ಆಗಿರಲಿ ಹೇಳಿದಂತೆ ನಡೆಯಬೇಕು" ಎಂದು ಹೇಳಿದ್ದಾರೆ.
ನವೆಂಬರ್ 20ರಂದು ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಎರಡೂವರೆ ವರ್ಷಗಳ ಆಳ್ವಿಕೆಯನ್ನು ಪೂರ್ಣಗೊಳಿಸಿದ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಏರ್ಪಟ್ಟಿದೆಯೆನ್ನಲಾದ ಅಧಿಕಾರ ಹಂಚಿಕೆಯ ಒಪ್ಪಂದವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಹುದ್ದೆಗಾಗಿ ಜಟಾಪಟಿ ಆರಂಭವಾಗಿತ್ತು.
ಡಿಸೆಂಬರ್ 1ರಂದು ಸಂಸತ್ ನ ಚಳಿಗಾಲದ ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ರಾಜ್ಯದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರವೊಂದನ್ನು ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳಲಿದೆ ಎಂದು ಹೇಳಲಾಗಿತ್ತು.
ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿ,"ದಯವಿಟ್ಟು ಕಾಯಿರಿ, ನಾನೇ ನಿಮಗೆ ಕರೆ ಮಾಡುವೆ’’ ಎಂದು ಹೇಳಿದ್ದರು. ಇದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು. ಇದರ ಬೆನ್ನಲ್ಲೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪೋಸ್ಟ್ ಮಹತ್ವವನ್ನು ಪಡೆದುಕೊಂಡಿದೆ.