ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ನಿಧನ
ಬೆಂಗಳೂರು: ಹಿರಿಯ ಪತ್ರಕರ್ತ ಅ.ಚ.ಶಿವಣ್ಣ (84) ಅವರು ಶುಕ್ರವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಪತ್ನಿ ಇಂದಿರಾ, ಪುತ್ರ ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈದ್ಯ ಡಾ.ದೀಪಕ್ ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರು ಹಾಗೂ ಸಹೋದ್ಯೋಗಿಗಳನ್ನು ಶ್ರೀಯುತರು ಅಗಲಿದ್ದಾರೆ. ಮಾಧ್ಯಮ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದ ಶಿವಣ್ಣ, ತಮ್ಮ ಮನೆಯಲ್ಲೇ ಮಧ್ಯಾಹ್ನ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.
1941ರ ಡಿಸೆಂಬರ್ 10ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಸಮೀಪದ ಅರಳುಮಲ್ಲಿಗೆ ಗ್ರಾಮದಲ್ಲಿ ಜನಿಸಿದ ಶಿವಣ್ಣ ಅವರು, ಶಿಕ್ಷಣವನ್ನು ಅಭ್ಯಾಸ ಮಾಡಿದ ಬಳಿಕ ದೇವನಹಳ್ಳಿ ತಾಲೂಕು ವಿಜಯಪುರ, ಅಲ್ಲಿಂದ ಬೆಂಗಳೂರಿಗೆ ಆಗಮಿಸಿ ‘ಲೋಕವಾಣಿ’ ಪತ್ರಿಕೆ ಮೂಲಕ ಪತ್ರಕರ್ತರಾಗಿ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು.
ಲೋಕವಾಣಿಯಲ್ಲಿ ವರದಿಗಾರರಾಗಿ, ಚಲನಚಿತ್ರ ವಿಮರ್ಶಕರಾಗಿ ಸೇವೆ ಸಲ್ಲಿಸಿದ ಶಿವಣ್ಣ, ಪ್ರಧಾನ ವರದಿಗಾರರಾಗಿ ಕಾರ್ಯನಿರ್ವಹಿಸಿ ಅಲ್ಲಿಂದ ಸಂಜೆವಾಣಿ ಪತ್ರಿಕೆಯಲ್ಲಿ ಸುಧೀರ್ಘ 26 ವರ್ಷಗಳ ಕಾಲ ಮುಖ್ಯವರದಿಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ, ಬೆಂಗಳೂರು ಪ್ರೆಸ್‍ಕ್ಲಬ್, ಬೆಂಗಳೂರು ವರದಿಗಾರರ ಕೂಟಕ್ಕೆ ಹೊಸರೂಪ ನೀಡುವಲ್ಲಿಯೂ ಅವರ ಮಹತ್ವದ್ದು ಎಂದು ಹೇಳಲಾಗಿದೆ.
ಶಿವಣ್ಣ ಅವರ ಮಾಧ್ಯಮ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ 1992ರಲ್ಲಿ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ ಪ್ರಶಸ್ತಿ(1999), ಕನ್ನಡ ಸಾಹಿತ್ಯ ಪರಿಷತ್ತಿನ ಕಿಡಿ ಶೇಷಪ್ಪ ಪ್ರಶಸ್ತಿ(1999), ಬೆಂಗಳೂರು ಪ್ರೆಸ್‍ಕ್ಲಬ್ ಪ್ರಶಸ್ತಿ ಹಾಗೂ ಕಾರ್ಯನಿರತ ಪತ್ರ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಪ್ರಶಸ್ತಿ, ಎಸ್.ವಿ.ಜಯಾಶೀಲರಾವ್ ಪ್ರಶಸ್ತಿ, ಅ.ನ.ಕೃ ಪ್ರಶಸ್ತಿಗಳು ಅವರಿಗೆ ಸಂದಿವೆ.