×
Ad

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಒಂದು ಗಂಟೆ ಕಾಲ ಸಿಲುಕಿಕೊಂಡ ಉತ್ತರ ಪ್ರದೇಶ ಸಂಸದ ರಾಜೀವ್ ರಾಯ್; ಪೊಲೀಸರು ನಿಷ್ಪ್ರಯೋಜಕರು ಎಂದು ವಾಗ್ಧಾಳಿ

Update: 2025-12-01 16:30 IST

ರಾಜೀವ್ ರಾಯ್ (File Photo: PTI)

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆಯ ಬಗ್ಗೆ ಮತ್ತೊಂದು ಟೀಕೆ ವ್ಯಕ್ತವಾಗಿದ್ದು, "ಬೆಂಗಳೂರಿನ ಅತ್ಯಂತ ಕೆಟ್ಟ ಸಂಚಾರ ನಿರ್ವಹಣೆಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಿಲುಕಿಕೊಂಡೆ. ಈ ವೇಳೆ ಯಾವುದೇ ಅಧಿಕಾರಿಯನ್ನೂ ನೆರವಿಗಾಗಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ" ಎಂದು ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಈ ಘಟನೆ ಭಾರಿ ಸಂಚಾರಿ ದಟ್ಟಣೆ ಇರುವ ಡಾ‌. ರಾಜಕುಮಾರ್ ಸಮಾಧಿಯ ರಸ್ತೆಯಲ್ಲಿ ನಡೆದಿದ್ದು, ಈ ಸಂಚಾರ ದಟ್ಟಣೆಯಿಂದ ನಾನು ವಿಮಾನವನ್ನು ತಪ್ಪಿಸಿಕೊಳ್ಳಬೇಕಾಯಿತು ಎಂದು ಅವರು ಬೆಂಗಳೂರಿನ ಗಂಭೀರ ಸಂಚಾರ ದಟ್ಟಣೆಯ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.

ಇಂದಿನಿಂದ (ಸೋಮವಾರ) ಪ್ರಾರಂಭಗೊಂಡಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವರು ಹೊಸದಿಲ್ಲಿಗೆ ತೆರಳಬೇಕಿತ್ತು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಜೀವ್ ರಾಯ್, "ಮಾನ್ಯ ಕರ್ನಾಟಕ ಮುಖ್ಯಮಂತ್ರಿಗಳೇ, ನನಗಿದನ್ನು ಹೇಳಲು ವಿಷಾದವಾಗುತ್ತಿದ್ದರೂ, ನಿಮ್ಮಲ್ಲಿ ಅತ್ಯಂತ ಕೆಟ್ಟ ಸಂಚಾರ ನಿರ್ವಹಣೆ ಇದೆ ಹಾಗೂ ಅತ್ಯಂತ ಬೇಜವಾಬ್ಸಾರಿ ಮತ್ತು ನಿಷ್ಪ್ರಯೋಜಕ ಪೊಲೀಸರಿದ್ದಾರೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಸುತ್ತಮುತ್ತ ಯಾವೊಬ್ಬ ಪೊಲೀಸ್ ಸಿಬ್ಬಂದಿಯೂ ಇರಲಿಲ್ಲ ಎಂಬುದರತ್ತ ಅವರು ತಮ್ಮ ಪೋಸ್ಟ್‌ನಲ್ಲಿ ಗಮನ ಸೆಳೆದಿದ್ದಾರೆ.

ತಮ್ಮ ಈ ಮಾತಿಗೆ ಪುರಾವೆಯಾಗಿ ಅವರು ತಮ್ಮ ಮೊಬೈಲ್‌ನ ಕಾಲ್ ಲಾಗ್ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ನಾಲ್ಕು ವಿವಿಧ ಸಂಚಾರಿ ಸಹಾಯವಾಣಿಗೆ ಅವರು ಕರೆ ಮಾಡಿದ್ದರೂ, ಯಾರೊಬ್ಬರೂ ಅವರ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಆರೋಪಿಸಲಾಗಿದೆ.

ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಅತ್ಯಂತ ಕುಖ್ಯಾತ ಸಂಚಾರ ದಟ್ಟಣೆ ಎಂದು ದೂರಿರುವ ಅವರು, ತಮ್ಮ ಪೋಸ್ಟ್‌ನೊಂದಿಗೆ ಬೆಂಗಳೂರು ನಗರ ಪೊಲೀಸರು ಹಾಗೂ ಜಂಟಿ ಸಂಚಾರ ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿದ್ದಾರೆ.

ಸದ್ಯ ಈ ಪೋಸ್ಟ್ ವೈರಲ್ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News