ನಾನೊಬ್ಬನೇ ಅಧಿವೇಶನದಲ್ಲಿ ಉತ್ತರ ಕೊಡುತ್ತೇನೆ : ಡಿ.ಕೆ.ಶಿವಕುಮಾರ್
ಬೆಂಗಳೂರು : ‘ನಾಳೆಯೇ ಖಾತೆ ಹಂಚಿಕೆ ಮಾಡಬೇಕು ಎನ್ನುವುದು ಏನೂ ಇಲ್ಲ. ವಿಧಾನ ಮಂಡಲ ಅಧಿವೇಶನದಲ್ಲೂ ನಾನೊಬ್ಬನೇ ಉತ್ತರ ಕೊಡುತ್ತೇನೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಭೇಟಿ ಬಳಿಕ ಸಂಪುಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಹಿಳೆಗೆ ಒಂದು ಸ್ಥಾನ ಮೀಸಲಿಡಲಾಗಿದೆ. ಆದರೆ, ಖಾತೆ ಹಂಚಿಕೆಯೂ ಶೀಘ್ರದಲ್ಲಿಯೇ ಆಗಲಿದೆ. ಅಧಿವೇಶನದಲ್ಲಿ ಯಾರು ಏನೇ ಪ್ರಶ್ನೆ ಕೇಳಿದರೂ ನಾನೊಬ್ಬನೇ ಉತ್ತರ ಕೊಡುತ್ತೇನೆ ಎಂದರು.
ಸಚಿವ ಬಿ.ನಾಗೇಂದ್ರ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಯಾರ ಮೇಲೆ ಪ್ರಕರಣ ದಾಖಲಾಗಿಲ್ಲ ಹೇಳಿ?.ಎಚ್.ಡಿ. ಕುಮಾರಸ್ವಾಮಿ ಮೇಲೆ ಪ್ರಕರಣ ಇಲ್ಲವೇ? ಅವರು ಜಾಮೀನು ಮೇಲೆ ಹೊರಗಡೆ ಇದ್ದಾರೆ ಅಲ್ಲವೇ. ನನ್ನ ಮೇಲೆಯೂ ಪ್ರಕರಣ ಇದೆ. ಇನ್ನೂ, ಬಿ.ನಾಗೇಂದ್ರ ಕೋರ್ಟ್ ಷರತ್ತು ಉಲ್ಲಂಘನೆ ವಿಚಾರ ನನಗೆ ಗೊತ್ತಿಲ್ಲ. ನಾವು ಎಲ್ಲವೂ ನೋಡಿದ್ದೇವೆ. ವಿಪಕ್ಷದವರಿಗೆ ಮಾತಾಡಲು ಒಂದು ವಿಷಯ ಬೇಕು ಅಷ್ಟೇ, ಮಾತನಾಡುತ್ತಾರೆ ಎಂದು ಟೀಕಿಸಿದರು.