ಬೆಂಗಳೂರು : ನಿರ್ಮಲಾ ಸೀತಾರಾಮನ್ ಅವರ ನಕಲಿ ವಿಡಿಯೋ ಬಳಸಿ ವೃದ್ಧನಿಗೆ 1 ಲಕ್ಷ ರೂ.ವಂಚಿಸಿದ ಆರೋಪಿಗಳು: ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು, ಸೆ.7: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿದ್ದ ನಕಲಿ ವಿಡಿಯೋ ತುಣುಕನ್ನು ಸೈಬರ್ ವಂಚಕರು ವಂಚನೆಗೆ ಬಳಸಿಕೊಂಡಿದ್ದು, ಹೆಚ್ಚಿನ ಲಾಭಾಂಶ ನೀಡುವುದಾಗಿ ಬಂದ ಜಾಹೀರಾತು ನಂಬಿದ ವೃದ್ಧರೊಬ್ಬರು 1 ಲಕ್ಷ ರೂ. ಹೂಡಿಕೆ ಮಾಡಿ ಹಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ದೊಡ್ಡಬೊಮ್ಮಸಂದ್ರ ನಿವಾಸಿ ವೇಣುಗೋಪಾಲ್(64) ವಂಚನೆಗೊಳಗಾದ ವೃದ್ಧ ಎಂದು ಗುರುತಿಸಲಾಗಿದೆ. ಅವರು ನೀಡಿದ ದೂರು ಆಧರಿಸಿ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ದೂರಿನ ವಿವರ: ಆಗಸ್ಟ್ 27ರಂದು ವೇಣುಗೋಪಾಲ್ ಅವರು ಯೂಟ್ಯೂಬ್‍ನಲ್ಲಿ ಕಡಿಮೆ ಹಣ ಹೂಡಿದರೆ ತ್ವರಿತವಾಗಿ ಹೆಚ್ಚು ಲಾಭ ಗಳಿಸಬಹುದು ಎಂಬ ಜಾಹೀರಾತು ನೋಡಿದ್ದರು. ಅದರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಡಿಯೋ ತುಣುಕನ್ನು ಆರೋಪಿಗಳು ಬಳಸಿಕೊಂಡಿದ್ದರು. ಜಾಹೀರಾತು ಕಂಡು ಆಸೆಗೊಳಗಾದ ವೇಣುಗೋಪಾಲ್, ಹಣ ಹೂಡಿಕೆಗೆ ಮುಂದಾಗಿದ್ದರು. ಕೂಡಲೇ ಸಂಬಂಧಿಸಿದ ಆ್ಯಪ್ ಡೌನ್‍ಲೋಡ್ ಮಾಡಿ ನೋಂದಣಿ ಮಾಡಿಕೊಂಡಿದ್ದರು.
ನೋಂದಣಿ ಆಗುತ್ತಿದ್ದ ಕೂಡಲೇ ಕರೆ ಮಾಡಿದ ಅನಾಮಿಕ ವ್ಯಕ್ತಿಯು ಟ್ರೇಡಿಂಗ್ ಮ್ಯಾನೇಜರ್ ಎಂದು ವೃದ್ಧನನ್ನು ಪರಿಚಯಿಸಿಕೊಂಡಿದ್ದ. 22ಸಾವಿರ ರೂ. ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದ. ಇದರಂತೆ ವೇಣುಗೋಪಾಲ್ ಅವರು ಆನ್‍ಲೈನ್ ಮುಖಾಂತರ ಹಣ ಪಾವತಿಸಿದ್ದರು. ಬಳಿಕ ವಿವಿಧ ಕಾರಣಗಳನ್ನು ನೀಡಿ ಹಂತ-ಹಂತವಾಗಿ 1.04 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡ ಸೈಬರ್ ಆರೋಪಿಗಳು ಹಣ ನೀಡದೆ ವಂಚಿಸಿದ್ದಾರೆ ಎಂದು ವೇಣುಗೋಪಾಲ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.