×
Ad

ಬೆಂಗಳೂರು | ಅವಾಚ್ಯ ನಿಂದನೆಯ ಪ್ರಶ್ನಿಸಿದ್ದಕ್ಕೆ ಹಲ್ಲೆ: ಮೂರು ದಿನಗಳ ಬಳಿಕ ಯುವಕ ಮೃತ್ಯು, ಪ್ರಕರಣ ದಾಖಲು

Update: 2025-09-14 19:17 IST

ಬೆಂಗಳೂರು, ಸೆ. 14: ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು ಪ್ರಶ್ನಿಸಿ ಹಲ್ಲೆಗೊಳಗಾದ ಯುವಕನೊಬ್ಬ ಮೂರು ದಿನಗಳ ಬಳಿಕ ಮೃತಪಟ್ಟಿದ್ದು, ಈ ಸಂಬಂಧ ಆರೋಪಿ ವಿರುದ್ಧ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಹಾರ ಮೂಲದ ಕಾರ್ಮಿಕ ಭೀಮ್ ಕುಮಾರ್(25) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತನ ಸ್ನೇಹಿತರು ನೀಡಿದ ದೂರಿನನ್ವಯ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಲ್ಮಾನ್‍ಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅರೆಕೆರೆ ಬಳಿ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಬಂದಿದ್ದ ಭೀಮ್ ಕುಮಾರ್ ಸ್ನೇಹಿತರೊಂದಿಗೆ ಮೈಕೋ ಲೇಔಟ್ ವ್ಯಾಪ್ತಿಯಲ್ಲಿ ವಾಸವಿದ್ದ. ಸೆಪ್ಟೆಂಬರ್ 7ರಂದು ಭೀಮ್ ಕುಮಾರ್ ಮತ್ತು ಆತನ ಸ್ನೇಹಿತರು ಅರೆಕೆರೆ ಬಳಿ ಪಾನಿಪುರಿ ತಿನ್ನುತ್ತಾ ನಿಂತಿದ್ದರು.

ಈ ವೇಳೆ ಅಲ್ಲಿಯೇ ಇದ್ದ ಸಲ್ಮಾನ್ ಎಂಬಾತ ಭೀಮ್ ಕುಮಾರ್ ಮತ್ತವನ ಸ್ನೇಹಿತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಭೀಮ್ ಕುಮಾರ್ ಪ್ರಶ್ನಿಸಿದಾಗ ಸಣ್ಣ ಗಲಾಟೆಯಾಗಿತ್ತು. ಇದಾದ ನಂತರ ಇಬ್ಬರು ಸ್ನೇಹಿತರು ವಾಪಸ್ ಹೊರಟಾಗ ಮತ್ತೋರ್ವ ಸ್ನೇಹಿತ ಧೀರಜ್‍ನೊಂದಿಗೆ ಭೀಮ್ ಕುಮಾರ್ ತನ್ನ ಮನೆಯತ್ತ ಹೊರಟಿದ್ದ.

ಅದೇ ವೇಳೆ ಹಿಂಬಾಲಿಸಿಕೊಂಡು ಬಂದ ಸಲ್ಮಾನ್, ಧೀರಜ್‍ನ ಮುಖಕ್ಕೆ ಕೈನಿಂದ ಪಂಚ್ ಮಾಡಿ, ನಂತರ ಬಲವಾಗಿ ಭೀಮ್ ಕುಮಾರ್‍ನ ಕುತ್ತಿಗೆಗೆ ಮುಷ್ಠಿಯಿಂದ ಪಂಚ್ ಮಾಡಿದ್ದ. ಈ ವೇಳೆ ರಸ್ತೆ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದ ಭೀಮ್ ಕುಮಾರ್‍ನನ್ನು ಆತನ ಸ್ನೇಹಿತ ಧೀರಜ್ ಮನೆಗೆ ಕರೆತಂದು ಮಲಗಿಸಿದ್ದ. ಮೂರು ದಿನಗಳ ಕಾಲ ಅರೆಪ್ರಜ್ಞಾವಸ್ಥೆಯಲ್ಲಿದ್ದ ಭೀಮ್ ಕುಮಾರ್ ಸೆಪ್ಟೆಂಬರ್ 10ರಂದು ಸ್ನೇಹಿತರು ಎಬ್ಬಿಸಲು ಯತ್ನಿಸಿದಾಗ ಮೃತಪಟ್ಟಿರುವುದು ಕಂಡು ಬಂದಿದೆ. ನಂತರ ಮೈಕೋ ಲೇಔಟ್ಲೀ ಪೊಸ್ ಠಾಣೆಗೆ ಆತನ ಸ್ನೇಹಿತರು ದೂರು ನೀಡಿದ್ದಾರೆ.

ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಪುಟ್ಟೇನಹಳ್ಳಿ ಠಾಣೆಗೆ ಪ್ರಕರಣ ವರ್ಗಾವಣೆಯಾಗಿದ್ದು, ಆರೋಪಿ ಪತ್ತೆಗಾಗಿ ಹುಡುಕಾಟ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News