×
Ad

ಪದ್ಮಲತಾ, ವೇದದಲ್ಲಿ, ಮಾವುತ ನಾರಾಯಣ, ಯಮುನ, ಸೌಜನ್ಯ ಪ್ರಕರಣಗಳನ್ನು ಎಸ್‍ಐಟಿಗೆ ವಹಿಸುವಂತೆ ‘ಸಮಾನ ಮನಸ್ಕರ’ ಒತ್ತಾಯ

Update: 2025-08-21 22:38 IST

ಬೆಂಗಳೂರು: ಧರ್ಮಸ್ಥಳದ ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಣ, ಯಮುನ, ಸೌಜನ್ಯ ಕೊಲೆ ಪ್ರಕರಣಗಳು, ಭೂಕಬಳಿಕೆ, ಮೈಕ್ರೋ ಫೈನಾನ್ಸ್ ದೌರ್ಜನ್ಯಗಳು, ದಲಿತರ ಮೀಸಲು ಭೂಮಿ ಕಬಳಿಕೆ, ಆರ್ಥಿಕ ಅಪರಾಧ ಆರೋಪದ ಪ್ರಕರಣಗಳನ್ನು ಈಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡಕ್ಕೆ (ಎಸ್‍ಐಟಿ) ವಹಿಸಲು ಸಮಸ್ಯೆಗಳಿದ್ದಲ್ಲಿ ಪ್ರತ್ಯೇಕವಾದ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಒಳಪಡಿಸಬೇಕು ಎಂದು ಸಮಾನ ಮನಸ್ಕರು ಆಗ್ರಹಿಸಿದ್ದಾರೆ.

ಗುರುವಾರ ನಗರದ ಅಲುಮ್ನಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾನ ಮನಸ್ಕರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. 20 ವರ್ಷಗಳ ಅತ್ಯಾಚಾರ, ಅಸಹಜ ಸಾವು, ಕೊಲೆ ಪ್ರಕರಣಗಳನ್ನು ಎಸ್‍ಐಟಿ ರಚನೆಯ ಸಂಬಂಧ ಹೊರಡಿಸಲಾದ ಆದೇಶದಲ್ಲಿ ಇರುವಂತೆಯೇ ಪರಿಪೂರ್ಣವಾದ ತನಿಖೆಗೆ ಒಳಪಡಿಸಬೇಕು ಎಂದು ಸಮಾನ ಮನಸ್ಕರು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಹಿರಿಯ ವಕೀಲ ಬಾಲನ್, ‘ನ್ಯಾಯ ನಮ್ಮ ಕಡೆಯಿದೆ. ಆದರೆ ನಮ್ಮ ಸಂಖ್ಯೆ ಕಡಿಮೆಯಿದೆ. ಅದಕ್ಕಾಗಿ ರಾಜ್ಯದಲ್ಲಿ ಜನಾಭಿಪ್ರಾಯ ರೂಪಿಸಬೇಕು. ಯುವಜನರನ್ನು ಹೋರಾಟಕ್ಕೆ ಬರುವಂತೆ ಪ್ರೇರೇಪಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಅಂಕಣಕಾರ ಶಿವಸುಂದರ್ ಮಾತನಾಡಿ, ‘ಧರ್ಮಸ್ಥಳವನ್ನು ಬೆಂಬಲಿಸಿ ವಿರೋಧ ಪಕ್ಷದವರು ಪ್ರತಿಭಟನೆ ಮಾಡುತ್ತಿರುವುದು ಸರಕಾರದ ಕೆಲಸವನ್ನು ಅಡ್ಡಿಪಡಿಸುವ ಅಪರಾಧಿ ಕೃತ್ಯ. ಅದು ಆರೋಪಿಗಳ ರಕ್ಷಣೆಗೆ ನಿಂತಂತೆ, ಅದನ್ನು ವಿರೋಧಿ ಪೊಲೀಸ್ ಪ್ರಕರಣವನ್ನು ದಾಖಲಿಸಬೇಕು. ಜತೆಗೆ ಸುದ್ದಿಗೋಷ್ಠಿಯನ್ನು ಕೂಡ ಮಾಡಬೇಕು’ ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕಾನಾಥ್, ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ, ನವೀನ್ ಸೂರಿಂಜೆ, ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ, ಲೇಖಕಿ ವಸುಂಧರಾ ಭೂಪತಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಡಾ.ಕೆ.ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಕನ್ನಡಪರ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ಮತ್ತಿತರರು ಹಾಜರಿದ್ದರು.

ಪ್ರಮುಖ ನಿರ್ಣಯ:

‘ವಿಪಕ್ಷವಾಗಿರುವ ಬಿಜೆಪಿಯು ಬಹಿರಂಗವಾಗಿ ಎಸ್‍ಐಟಿ ತನಿಖೆ ಮತ್ತು ಸಾಕ್ಷಿ, ದೂರುದಾರರಿಗೆ ಬೆದರಿಕೆ ಒಡ್ಡುತ್ತಿದ್ದು, ಅದನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತರ ಪರವಾಗಿ ಕೆಲಸ ಮಾಡುವುದು ಸರಕಾರದ ಸಾಂವಿಧಾನಿಕ ಕರ್ತವ್ಯ. ಸರಕಾರ ಮಾಡಬೇಕಿರುವ ಕೆಲಸವನ್ನು ಹೋರಾಟಗಾರರು ಮಾಡುತ್ತಿದ್ದಾರೆ. ಆದರೆ ಸರಕಾರದ ಕೆಲ ಪ್ರಭಾವಿಗಳು ಮತ್ತು ಪೊಲೀಸರು ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸುವ ಬೆದರಿಕೆ ಒಡುವ ಮೂಲಕ ದೂರುದಾರರ, ಸಂತ್ರಸ್ತರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದ್ದಾರೆ. ಇವೆಲ್ಲವನ್ನೂ ನಿಯಂತ್ರಿಸಿ, ಎಸ್‍ಐಟಿ ತನಿಖೆ ಪ್ರಾಮಾಣಿಕ, ಪಾರದರ್ಶಕವಾಗಿ ನಡೆಯುವಂತೆ ಕ್ರಮ ವಹಿಸಬೇಕು ಹಾಗೂ ಸೌಜನ್ಯ ಪ್ರಕರಣವನ್ನು ಮರು ತನಿಖೆ ಮಾಡಬೇಕು’ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News