ಮುಟ್ಟಿನ ರಜೆ: ರಾಜ್ಯ ಸರಕಾರದ ಅಧಿಸೂಚನೆಗೆ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆ ಹಿಂಪಡೆದ ಹೈಕೋರ್ಟ್
ರಾಜ್ಯ ಸರಕಾರದ ಮನವಿ ಪರಿಗಣಿಸಿ ಕ್ರಮ, ಡಿ.10ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ಸೌಲಭ್ಯ ಒದಗಿಸುವ ಸಂಬಂಧ ರಾಜ್ಯ ಸರಕಾರದ ಹೊರಡಿಸಿದ್ದ ಅಧಿಸೂಚನೆಗೆ ಇಂದು ಬೆಳಗ್ಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಹಿಂಪಡೆದಿದೆ.
ತಡೆಯಾಜ್ಞೆ ಹಿಂಪಡೆಯುವಂತೆ ರಾಜ್ಯ ಸರಕಾರ ಮಾಡಿದ ಮನವಿಯನ್ನು ಪರಿಗಣಿಸಿ ಸರಕಾರ ಆದೇಶವನ್ನು ಮಾರ್ಪಾಡು ಮಾಡಿದೆ.
ತಡೆಯಾಜ್ಞೆ ನೀಡಿದ ಕೆಲವೇ ಗಂಟೆಗಳ ಬಳಿಕ ಹೈಕೋರ್ಟ್ ತನ್ನ ಆದೇಶವನ್ನು ಹಿಂಪಡೆದಿದ್ದು, ಬುಧವಾರ ವಿಚಾರಣೆ ಮುಂದೂಡಿದೆ.
ಇದಕ್ಕೂ ಮೊದಲು ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವ ಸಂಬಂಧ ರಾಜ್ಯ ಸರಕಾರದ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲ್ ಗಳ ಸಂಘ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿಯವರಿದ್ದ ಏಕಸದಸ್ಯ ನ್ಯಾಯಪೀಠ ಇಂದು ಬೆಳಗ್ಗೆ ವಿಚಾರಣೆ ನಡೆಸಿತು.
ಭೋಜನ ವಿರಾಮಕ್ಕೂ ಮುನ್ನ ನ್ಯಾಯಪೀಠದ ಮುಂದೆ ಹಾಜರಾದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಋತುಚಕ್ರದ ರಜೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀತಿ ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಪ್ರಕರಣವೊಂದರಲ್ಲಿ ಆದೇಶ ಮಾಡಿದೆ. ಅದೇ ರೀತಿ ಕಾನೂನು ಆಯೋಗವೂ ಈ ಸಂಬಂಧ ಶಿಫಾರಸು ಮಾಡಿದೆ. ಇದರ ಭಾಗವಾಗಿ ರಾಜ್ಯ ಸರ್ಕಾರಕ್ಕೆ ಸಂವಿಧಾನದ ಪರಿಚ್ಛೇದ 142ರ ಅಡಿ ದೊರೆತಿರುವ ಅಧಿಕಾರ ಬಳಸಿ ಕ್ರಮಕೈಗೊಂಡಿದೆ. ಸರ್ಕಾರದ ಅಧಿಸೂಚನೆಯನ್ನು ಕಾನೂನುಬದ್ಧವಾಗಿ ಹೊರಡಿಸಲಾಗಿದೆ. ಸರ್ಕಾರದ ವಾದ ಆಲಿಸಿದೇ ಅಧಿಸೂಚನೆಗೆ ತಡೆ ನೀಡಬಾರದು ಎಂದು ಮನವಿ ಮಾಡಿದರು.
ಇದನ್ನು ಆಲಿಸಿದ ನ್ಯಾಯಪೀಠ, ಸರ್ಕಾರದ ಅಧಿಸೂಚನೆಗೆ ತಡೆಯಾಜ್ಞೆ ನೀಡಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಿತಲ್ಲದೆ, ಬುಧವಾರ ಉಭಯ ಪಕ್ಷಕಾರರ ವಾದ ಆಲಿಸಿ, ಮಧ್ಯಂತರ ತಡೆ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿ, ಅರ್ಜಿ ವಿಚಾರಣೆ ಮುಂದೂಡಿತು.