ಬೆಂಗಳೂರು | ‘ವಿಮಲ್’ ಖರೀದಿ ಗಲಾಟೆ ಕೊಲೆಯಲ್ಲಿ ಅಂತ್ಯ: ಆರೋಪಿಯ ಬಂಧನ
ಸಾಂದರ್ಭಿಕ ಚಿತ್ರ
ಬೆಂಗಳೂರು: ‘ಇಪ್ಪತ್ತು ರೂ.ಗೆ ವಿಮಲ್ ತಗೊಂಡು ಬಾ’ ಎಂದಿದ್ದಕ್ಕೆ ಆರಂಭಗೊಂಡ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾಗಿದ್ದು, ಈ ಸಂಬಂಧ ಆರೋಪಿಯನ್ನು ಇಲ್ಲಿನ ವರ್ತೂರು ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಸೀತಾರಾಂ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಜಿತೇಂದ್ರ ಪಾಂಡೆ ಯಾನೆ ಬಬ್ಲು ಕೊಲೆಯಾದ ವ್ಯಕ್ತಿ. ಬಿಹಾರ ಮೂಲದ ಸೀತಾರಾಂ ಮತ್ತು ಜಿತೇಂದ್ರ ಪಾಂಡೆ ಸ್ನೇಹಿತರಾಗಿದ್ದರು. ವರ್ತೂರಿನ ರಾಮಗೊಂಡನಹಳ್ಳಿ ಖಾಸಗಿ ಶಾಲೆಯ ಕಟ್ಟಡದ ಟೈಲ್ಸ್ ಕೆಲಸ ಮಾಡುತ್ತಿದ್ದರು.
ಜು.28ರಂದು ರಾತ್ರಿ ಇಬ್ಬರು ಒಟ್ಟಿಗೆ ಮದ್ಯ ಕುಡಿದು ಪಾರ್ಟಿ ಮಾಡಿದ್ದಾರೆ. ಈ ವೇಳೆಯಲ್ಲಿ ಜಿತೇಂದ್ರ ಪಾಂಡೆಯು ಸೀತಾರಾಂ ಪಾಂಡೆಗೆ ‘20 ರೂಪಾಯಿಗೆ ವಿಮಲ್ ತಗೊಂಡು ಬಾ’ ಎಂದು ಹೇಳಿದ್ದಾನೆ. ‘ನನಗೆ ವಿಮಲ್ ತರಲು ಕಳುಹಿಸುತ್ತೀಯಾ’ ಎಂದು ಸೀತಾರಾಂ ಪಾಂಡೆ ಗಲಾಟೆ ಮಾಡಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ, ಸೀತಾರಾಂ ಪಾಂಡೆ ಸುತ್ತಿಗೆಯಿಂದ ಜಿತೇಂದ್ರ ಪಾಂಡೆಗೆ ಹೊಡೆದಿದ್ದಾನೆ. ಇದರ ಪರಿಣಾಮ ಜಿತೇಂದ್ರ ಪಾಂಡೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜು.29ರಂದು ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದು, ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.