ಜಿಬಿಎ ಹೆಸರನ್ನು ‘ಬೃಹತ್ ಬೆಂಗಳೂರು ಪ್ರಾಧಿಕಾರ’ ಎಂದು ಬದಲಾಯಿಸಿ: ಪ್ರೊ.ಪುರುಷೋತ್ತಮ ಬಿಳಿಮಲೆ
ಪ್ರೊ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎನ್ನುವ ಹೆಸರು ಕನ್ನಡದ ಅಸ್ಮಿತೆಯನ್ನು ಸಮರ್ಥವಾಗಿ ಪ್ರತಿಬಿಂಬಿಸಬೇಕಾದಲ್ಲಿ ಅದಕ್ಕೆ ಬೃಹತ್ ಬೆಂಗಳೂರು ಪ್ರಾಧಿಕಾರ ಎಂದು ಕರೆಯುವುದು ಹೆಚ್ಚು ಸಮಂಜಸವಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಗುರುವಾರ ಈ ಕುರಿತಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದಿರುವ ಅವರು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎನ್ನುವ ಹೆಸರಿಗೆ ಪರ್ಯಾಯವಾಗಿ ಕನ್ನಡ ಪದಗಳನ್ನು ಸೂಚಿಸಲು ಸಾರ್ವಜನಿಕರಿಗೆ ಕರೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆ ಪ್ರಜಾಸತ್ತಾತ್ಮಕವಾಗಿದ್ದು, ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ವಾಗತಿಸುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎನ್ನುವ ಪದವನ್ನು ಕನ್ನಡೀಕರಿಸಲು ಹಲವಾರು ಸಲಹೆಗಳು ಸಾರ್ವಜನಿಕರಿಂದ ಸ್ವೀಕೃತವಾಗಿದ್ದು, ಒಟ್ಟಾರೆಯಾಗಿ ಅದನ್ನು ಬೃಹತ್ ಬೆಂಗಳೂರು ಪ್ರಾಧಿಕಾರ ಎಂದು ಕರೆಯುವುದೇ ಸಮಂಜಸವೆನ್ನುವ ಅಭಿಪ್ರಾಯ ಒಡಮೂಡಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಲುವು ಸಹ ಬೃಹತ್ ಬೆಂಗಳೂರು ಪ್ರಾಧಿಕಾರ ಎಂದೇ ಆಗಿದ್ದು, ಈ ರೀತಿಯಲ್ಲಿ ಹೆಸರನ್ನು ಬದಲಾಯಿಸಿದಲ್ಲಿ ಸರಕಾರವು ಕನ್ನಡದ ಅಸ್ಮಿತೆಯನ್ನು ಗೌರವಿಸಿದಂತಾಗುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಮಹಾಪೌರರು ಮತ್ತು ಉಪ ಮಹಾಪೌರರು ಕನ್ನಡದವರೇ ಆಗಿರಲಿ. ಮುಂದಿನ ದಿನಗಳಲ್ಲಿ ಪ್ರಾಧಿಕಾರ(ಜಿಬಿಎ)ದ ವ್ಯಾಪ್ತಿಯ ಪಾಲಿಕೆಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಆಯ್ಕೆಯಾಗುವ ಪಾಲಿಕೆಯ ಮಹಾಪೌರರುಗಳು ಕಡ್ಡಾಯವಾಗಿ ಕನ್ನಡದವರೇ ಆಗಿರುವಂತೆ ಸರಕಾರವು ನೋಡಿಕೊಳ್ಳಬೇಕಿದೆ. ಕನ್ನಡ ಭಾಷೆ ರಾಜಧಾನಿ ಬೆಂಗಳೂರು ನಗರದಲ್ಲಿ ತನ್ನ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಬೇಕಾದಲ್ಲಿ ಸರಕಾರದ ಈ ನಡೆ ಅತ್ಯಾವಶ್ಯಕವಾಗಿದೆ. ಸರಕಾರವು ಈಗಿನಿಂದಲೇ, ಈ ಬಗ್ಗೆ ಗಮನ ಹರಿಸುವುದು ಒಳಿತು ಎಂದು ಪುರುಷೋತ್ತಮ ಬಿಳಿಮಲೆ ಸಲಹೆ ನೀಡಿದ್ದಾರೆ.