×
Ad

ಬೆಂಗಳೂರು| ಪೊಲೀಸ್ ಸಮವಸ್ತ್ರ ಧರಿಸಿ ಪತ್ನಿಗೆ ವಿಡಿಯೋ ಕರೆ ಮಾಡಿದ ಕಳವು ಪ್ರಕರಣದ ಆರೋಪಿ; ಕರ್ತವ್ಯಲೋಪದಡಿ ಕಾನ್‍ಸ್ಟೇಬಲ್ ಅಮಾನತು

Update: 2025-08-08 21:21 IST

Photo credit: newindianexpress.com

ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿದ್ದ ಆರೋಪಿಯು ತನ್ನ ಹೆಂಡತಿಗೆ ಖುಷಿ ಪಡಿಸಲು ಪೊಲೀಸರ ಸಮವಸ್ತ್ರ ಧರಿಸಿ ವಿಡಿಯೋಕಾಲ್‍ನಲ್ಲಿ ಪೋಸ್ ಕೊಟ್ಟ ಪೋಟೋಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಆರೋಪದಡಿ ಗೋವಿಂದಪುರ ಠಾಣೆಯ ಪೊಲೀಸ್ ಕಾನ್‍ಸ್ಟೇಬಲ್‍ನನ್ನು ಅಮಾನತುಗೊಳಿಸಲಾಗಿದೆ.

ಮುಂಬೈ ಮೂಲದ ಶೇಖ್ ಸಲೀಂ ಯಾನೆ ಬಾಂಬೆ ಸಲೀಂ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖಾ ಸಂದರ್ಭದಲ್ಲಿ ಸಮವಸ್ತ್ರ ಧರಿಸಲು ಅವಕಾಶ ನೀಡಿ ಕರ್ತವ್ಯ ಲೋಪವೆಸಗಿದ ಆರೋಪದ ಮೇರೆಗೆ ಗೋವಿಂದಪುರ ಠಾಣೆ ಕಾನ್‍ಸ್ಟೇಬಲ್ ಎಚ್.ಆರ್.ಸೋನಾರೆ ಅವರನ್ನು ಬೆಂಗಳೂರಿನ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.

ಜೂ.23ರಂದು ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಕ್ ಸಲೀಂನನ್ನು ಬಂಧನಕ್ಕೊಳಪಡಿಸಲಾಗಿತ್ತು. ಈ ವೇಳೆ ಆತನಿಂದ ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಮೊಬೈಲ್ ಅನ್ನು ಪರಿಶೀಲಿಸಿದಾಗ, ಕಾನ್‍ಸ್ಟೇಬಲ್ ಎಚ್.ಆರ್.ಸೋನಾರೆ ಎಂಬ ಹೆಸರಿನ ಫಲಕ ಹೊಂದಿರುವ ಪೊಲೀಸ್ ಸಮವಸ್ತ್ರದಲ್ಲಿ ಆರೋಪಿಯು ಪೋಸ್ ನೀಡುತ್ತಿರುವ ಫೋಟೋಗಳು, ವಿಡಿಯೋಗಳು ಪತ್ತೆಯಾಗಿತ್ತು. ಆರೋಪಿ ಪೊಲೀಸ್ ಸಮವಸ್ತ್ರದಲ್ಲಿ ತನ್ನ ಪತ್ನಿಗೆ ವೀಡಿಯೊ ಕರೆ ಮಾಡಿರುವುದು ಕಂಡುಬಂದಿತ್ತು ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಡಿಸಿಪಿ ದೇವರಾಜ್ ಅವರು ಆಂತರಿಕ ತನಿಖೆ ನಡೆಸಿದ್ದು, ಈ ವೇಳೆ ವರ್ಷದ ಹಿಂದೆ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾಗ ಹೋಟೆಲ್‍ವೊಂದರಲ್ಲಿ ಕಸ್ಟಡಿಯಲ್ಲಿರಿಸಿದ್ದಾಗ ಆರೋಪಿ ಪೊಲೀಸ್ ಸಮವಸ್ತ್ರ ಧರಿಸಿ, ಫೋಟೋ ತೆಗೆದುಕೊಂಡಿದ್ದಾನೆಂಬುದು ತಿಳಿದುಬಂದಿದೆ. ಆರೋಪಿ ಸಲೀಂ ಬೆಂಗಳೂರು, ಮುಂಬೈ ಮತ್ತು ಪುಣೆ ಸೇರಿದಂತೆ ಹಲವೆಡೆ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಡಿಸಿಪಿ ದೇವರಾಜ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News