ಬೀದರ್ | ಲಿಂಗತ್ವ ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ 200 ಕೋಟಿ ರೂ. ಮೀಸಲಿಡಬೇಕು : ಭೀಮ್
ಬೀದರ್ : 2025-2026ನೇ ಸಾಲಿನ ರಾಜ್ಯ ಸರಕಾರದ ಬಜೆಟ್ ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ 200 ಕೋಟಿ ರೂ. ಮೀಸಲಿಡಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಸದಸ್ಯ ಭೀಮ್ ಅವರು ಒತ್ತಾಯಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ವಾರ್ಷಿಕ 200 ಕೋಟಿ ರೂ. ಮೀಸಲಿಡುವುದಾಗಿ ತಿಳಿಸಿದೆ. ಆದರೆ ಅದು ಇನ್ನೂ ಜಾರಿಗೆ ತಂದಿಲ್ಲ. ಲಿಂಗತ್ವ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಹೇಳಲಾಗಿತ್ತು. ಆದರೆ ಅದು ಸಹ ಇಲ್ಲಿಯವರೆಗೆ ಸ್ಥಾಪನೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಲಿಂಗತ್ವ ಅಲ್ಪಸಂಖ್ಯಾತರಿಗೆ ವಸತಿ ಸೌಲಭ್ಯ ನೀಡಬೇಕು. ನಮ್ಮ ಸಮುದಾಯದವರಿಗೆ ವಸತಿಗಾಗಿ ಹಾಗೂ ನಾವು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಯೋಜನೆ ರೂಪಿಸಬೇಕು. ಇವಕ್ಕಾಗಿ ಪ್ರತಿ ಲಿಂಗತ್ವ, ಅಲ್ಪಸಂಖ್ಯಾತ ವ್ಯಕ್ತಿಗೆ 2 ಲಕ್ಷ ರೂ. ಆರ್ಥಿಕ ನೆರವು ನೀಡಲು ಬಜೆಟ್ ನಲ್ಲಿ ಮೀಸಲಿಡಬೇಕು. ಉಚಿತ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ (Sex reassignment surgery) ಮತ್ತು ಶಸ್ತ್ರಚಿಕಿತ್ಸೆಯ ನಂತರ 6 ತಿಂಗಳ ಆರೈಕೆಯ ಬೆಂಬಲ ನೀಡಲು ಬಜೆಟ್ ನಲ್ಲಿ ಹಣ ಮೀಸಲಿಡಬೇಕು. ಶೇ.1ರಷ್ಟು ಮೀಸಲಾತಿಯಲ್ಲಿ ಲಿಂಗತ್ವ, ಅಲ್ಪಸಂಖ್ಯಾತರು ಉದ್ಯೋಗ ಪಡೆಯಲು ಸರ್ಕಾರ ಅವರಿಗೆ ತರಬೇತಿ ಮತ್ತು ಕೋಚಿಂಗ್ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಸದಸ್ಯರಾದ ದುರ್ಗಾ, ರೋಷ್ನಿ ಹಾಗೂ ಮಹೇಶ್ ಪಾಟೀಲ್ ಸೇರಿದಂತೆ ಇತರರು ಇದ್ದರು.