ಬೀದರ್ | ಮೈಕ್ರೋ ಯೋಜನೆಯಡಿ ಜಿಲ್ಲೆಗೆ ಮಂಜೂರಾಗಿದ್ದ 308 ಕೋಟಿ ರೂ. ಬಾಕಿ ಹಣಕ್ಕೆ ಪ್ರಸ್ತಾವನೆ ಸಲ್ಲಿಸಲು ಸಚಿವ ಈಶ್ವರ್ ಖಂಡ್ರೆ ಸೂಚನೆ
ಬೀದರ್ : 2024-25ನೇ ಸಾಲಿನ ಮೈಕ್ರೋ ಯೋಜನೆಯಡಿ ಜಿಲ್ಲೆಗೆ ಮಂಜೂರಾಗಿದ್ದ ಹಣದ ಪೈಕಿ 308 ಕೋಟಿ ರೂ. ಬಾಕಿ ಉಳಿದಿದ್ದು, ಜಿಲ್ಲೆಯ ಎಲ್ಲ ಶಾಸಕರೂ 10 ದಿನಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸಿ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಸೂಚಿಸಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಸಭೆಯ ಬಳಿಕ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸಂಬಂಧಿಸಿದ ಜಿಲ್ಲೆಯ ವಿವಿಧ ಯೋಜನೆ, ಕಾಮಗಾರಿಯ ಬಗ್ಗೆ ಅವರು ಚರ್ಚಿಸಿದರು.
ಶಾಸಕರಿಂದ ಬರುವ ಪಸ್ತಾವನೆಗಳನ್ನು ಸಮಾಜ ಕಲ್ಯಾಣ ಇಲಾಖೆ (ಎಸ್ ಸಿ ಎಸ್ ಪಿ, ಟಿ ಎಸ್ ಪಿ) ಅಧಿಕಾರಿಗಳು 5 ಕೆಲಸದ ದಿನಗಳಲ್ಲಿ ದೃಢೀಕರಣ ಮಾಡಬೇಕು ಎಂದು ತಿಳಿಸಿದ ಅವರು, ಊರಿನ ಹೆಸರಿನಲ್ಲಿ ಕಾಗುಣಿತ ದೋಷ ಇದೆ ಎಂದು ವಿವರಣೆ ಕೋರಿ ಕಡತ ಹಿಂತಿರುಗಿಸುವ ಮೂಲಕ ವಿಳಂಬ ಮಾಡಲಾಗುತ್ತಿದೆ. ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದರು.
ಮ್ಯಾಕ್ರೋ ಯೋಜನೆಯಡಿ 129.89 ಕೋಟಿ ರೂ. ಬಂದಿದೆ. ಬೃಹತ್ ಯೋಜನೆಗಳನ್ನು ಕೈಗೊಳ್ಳಲು ಈ ಹಣ ಬಳಕೆಯಾಗಬೇಕು. ಸರ್ಕಾರದಿಂದ ಮಂಜೂರಾದ ಯಾವುದೇ ಅನುದಾನ ಬಳಕೆಯಾಗದೆ ಉಳಿಯದಂತೆ ಕ್ರಮ ಕೈಗೊಂಡು ಜಿಲ್ಲೆಯ ಅಭಿವೃದ್ಧಿ ಮಾಡಬೇಕು ಎಂದು ತಿಳಿಸಿದ ಅವರು, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆಯಾಗಿದ್ದರ ಬಗ್ಗೆ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್, ಚಂದ್ರಶೇಖರ್ ಪಾಟೀಲ್, ಮಹಾನಗರ ಪಾಲಿಕೆಯ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ರಮ್ಯಾ ರಂಗಸ್ವಾಮಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಯ ಅಧ್ಯಕ್ಷರು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.