ವಾರ್ತಾ ಭಾರತಿ ಜನ ಸಾಮಾನ್ಯರ ಧ್ವನಿ : ಶಿವಾನಂದ ಮೇತ್ರೆ
ಕಲ್ಯಾಣ ಕರ್ನಾಟಕ ಆವೃತ್ತಿ ಲೋಕಾರ್ಪಣೆ ಪ್ರಯುಕ್ತ ಬಸವಕಲ್ಯಾಣದಲ್ಲಿ ಓದುಗರು, ಹಿತೈಷಿಗಳ ಸಭೆ
ಬೀದರ್ : ವಾರ್ತಾ ಭಾರತಿ ಮಾಧ್ಯಮ ಜನ ಸಾಮಾನ್ಯರ ಧ್ವನಿಯಾಗಿದೆ. ಇಂತಹ ಜನಪರ ಪತ್ರಿಕೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಬರುತ್ತಿರುವುದು ಸಂತೋಷದ ವಿಷಯವಾಗಿದೆ ಎಂದು ಹುಲಸುರ್ ತಹಶೀಲ್ದಾರ್ ಶಿವಾನಂದ ಮೇತ್ರೆ ಹೇಳಿದರು.
ವಾರ್ತಾಭಾರತಿ ಕಲಬುರಗಿಯಿಂದ ಕಲ್ಯಾಣ ಕರ್ನಾಟ ಆವೃತ್ತಿ ಬಿಡುಗಡೆ ಪ್ರಯುಕ್ತ ಬಸವಕಲ್ಯಾಣ ನಗರದ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಓದುಗರು, ವೀಕ್ಷಕರ ಹಾಗೂ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಶಿವಾನಂದ ಮೇತ್ರೆ, 23 ವರ್ಷದಿಂದ ವಾರ್ತಾಭಾರತಿ ಪತ್ರಿಕೆ ಸೇವೆ ಸಲ್ಲಿಸುತ್ತಾ ಬಂದಿದೆ. ಜನಪರ ಮತ್ತು ಜನರ ಧ್ವನಿಯಾಗಿರುವ ವಾರ್ತಾ ಭಾರತಿ ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಕೂಡ ಅದೇ ರೀತಿಯಾಗಿ ಮುಂದುವರಿಯಲಿ, ಈ ಭಾಗದಲ್ಲಿ ವಾರ್ತಾ ಭಾರತಿ ಪತ್ರಿಕೆಯ ಆವೃತ್ತಿ ಪ್ರಾರಂಭ ಮಾಡುತ್ತಿರುವುದರಿಂದ ಪತ್ರಿಕೆಯ ಪ್ರಧಾನ ಸಂಪಾದಕರಿಗೆ ಬಸವಕಲ್ಯಾಣ ಜನರ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.
ವಿಪರ್ಯಾಸ ಏನೆಂದರೆ ಶಿಕ್ಷಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಪತ್ರಿಕೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆಲ್ಲ ಕಾರಣ ಇಲೆಕ್ಟ್ರಾನಿಕ್ ಮಾಧ್ಯಮಗಳಾಗಿವೆ. ಪತ್ರಿಕೆ ಓದುವವರ ಸಂಖ್ಯೆ ಕೂಡ ಹೆಚ್ಚಾಗಬೇಕು. ಬಹುತೇಕ ಮಾಧ್ಯಗಳು ಅಗತ್ಯ ಸುದ್ದಿಯನ್ನು ಪ್ರಕಟಿಸುವುದಿಲ್ಲ. ಯಾವ ಸುದ್ದಿಗಳಿಗೆ ಮಹತ್ವ ನೀಡಬೇಕು ಎನ್ನುವುದೇ ಬಹುತೇಕ ಪತ್ರಿಕೆಗಳು ಮರೆತು ಬಿಟ್ಟಿವೆ. ಈಗಿರುವಾಗ ಜನಪರವಾಗಿ ಕಾರ್ಯನಿರ್ವಹಿಸುವ ವಾರ್ತಾಭಾರತಿಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ಮೊಟ್ಟ ಮೊದಲಿಗೆ ವಾರ್ತಾ ಭಾರತಿ ಪತ್ರಿಕೆ ಪ್ರಾರಂಭವಾದಾಗ ಜನರೇ ಇದನ್ನು ಬೆಳೆಸಿದ್ದಾರೆ. ಉಚಿತವಾಗಿ ನಮ್ಮ ಪತ್ರಿಕೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಅವರು ಇಂದಿಗೂ ಕೂಡ ನಮ್ಮ ಜೊತೆಗೆ ಇದ್ದಾರೆ. ವಾರ್ತಾ ಭಾರತಿ ಪತ್ರಿಕೆ ಜನಪರ ಪತ್ರಿಕೆಯಾಗಿದೆ. ಸತ್ಯ ಮತ್ತು ನಿರ್ಭಯವಾಗಿ ಸುದ್ದಿ ಬಿತ್ತರಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಎಸ್ರಬ್ ಅಲಿ ಖಾದ್ರಿ ಅವರು ಮಾತನಾಡಿ, ವಾರ್ತಾ ಭಾರತಿ ಪತ್ರಿಕೆ ಸತ್ಯವಾದ ಮತ್ತು ನ್ಯಾಯಪರ ಸುದ್ದಿ ಪ್ರಕಟಿಸುವ ಕೆಲಸ ಮಾಡುತ್ತಿದೆ. ಅದು ನಮ್ಮ ಭಾಗಕ್ಕೆ ಬರುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಂಟು ಕಾಂಬ್ಳೆ, ಹುಜುರ್ ಪಾಷಾ, ಸಂದೀಪ್ ಮುಕಿಂದೆ, ದಿಗಂಬರ್ ವರ್ಮಾ, ಜೈವರ್ಧನ್, ತಥಾಗತ್ ಮಿಕ್ಕೆ, ನವಾಝ್ ಖುರೇಷಿ, ಮಾರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಿಸೆಂಬರ್ 20ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿಯ ಎಸ್ ಎಂ ಪಂಡಿತ್ ರಂಗ ಮಂದಿರದಲ್ಲಿ ವಾರ್ತಾಭಾರತಿ ಕಲ್ಯಾಣ ಕರ್ನಾಟಕ ಆವೃತಿ ಬಿಡುಗಡೆಯಾಗಲಿದೆ.