ಬೀದರ್ | ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತ, ಕಾರ್ಮಿಕ, ದಲಿತ ಸಂಘಟನೆಗಳ ಒಕ್ಕೂಟದಿಂದ ಧರಣಿ
ಬೀದರ್ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ, ಕಾರ್ಮಿಕ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದಿಂದ ರವಿವಾರ ಸಾಯಂಕಾಲದಿಂದ ನಗರದ ಅಂಬೇಡ್ಕರ್ ವೃತ್ತದ ಬಳಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ.
ಬೀದರ್ ಜಿಲ್ಲೆಯನ್ನು ಹಸಿ ಬರಗಾಲ ಎಂದು ಘೋಷಣೆ ಮಾಡಿ ಪ್ರತಿ ಎಕರೆ ಭೂಮಿಗೆ 30 ಸಾವಿರ ರೂ. ಹಾಗೂ ಪ್ರತಿ ಹೇಕ್ಟರ್ ಭೂಮಿಗೆ 60 ಸಾವಿರ ರೂ. ಪರಿಹಾರ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು. 60 ವರ್ಷ ಪೂರೈಸಿದ ರೈತರಿಗೆ ಪ್ರತಿ ತಿಂಗಳು 10 ಸಾವಿರ ರೂ. ಗೌರವ ಧನ ನಿಗದಿಪಡಿಸಬೇಕು. ಬಿಎಸ್ ಎಸ್ ಕೆ ಸಕ್ಕರೆ ಕಾರ್ಖಾನೆ ಪುನರ್ ಸ್ಥಾಪನೆ ಮಾಡಿ, ಕಾರ್ಖಾನೆ ನೌಕರರ ಬಾಕಿ ಇರುವ ಸಂಬಳ ಬಿಡುಗಡೆ ಮಾಡಬೇಕು. ಹಾಗೆಯೇ ಕಾರ್ಖಾನೆಯಿಂದ ನಿವೃತ್ತಿ ಹೊಂದಿದ ನೌಕರರ 38 ಕೋಟಿ ರೂ.ಉಪದಾನ ಹಣ ನೀಡಬೇಕು ಎಂದು ಒತ್ತಾಯಿಸಲಾಗುತ್ತಿದೆ.
ಎಂಎಸ್ ಪಿ ಕುರಿತು ಕಾನೂನು ಅಂಗಿಕರಿಸಬೇಕು. ಹಾನಿಯಾದ ಬೆಳೆಗೆ ವಿಮಾ ಪರಿಹಾರ ಕೂಡಲೇ ಬಿಡುಗಡೆ ಮಾಡಬೇಕು. ಪ್ರತಿ ಟನ್ ಕಬ್ಬಿಗೆ 3 ಸಾವಿರ ರೂ.ಬೆಲೆ ನಿಗದಿ ಮಾಡಬೇಕು. ಎನ್ಎಸ್ಎಸ್‌ಕೆ ವಿರುದ್ಧ ತಂದಿರುವ ತಡೆಯಾಜ್ಞೆ ತೆರವುಗೊಳಿಸಿ ಚುನಾವಣೆ ಮಾಡುವ ಮೂಲಕ ಕಾರ್ಖಾನೆ ಪ್ರಾರಂಭಿಸಬೇಕು. ಹಿಂಗಾರು ಬಿತ್ತನೆಗೆ ಬೀಜ ಮತ್ತು ಗೊಬ್ಬರ ಸರಕಾರವೇ ಪೂರೈಸಬೇಕು. ಪ್ರತಿ ಗ್ರಾಮಗಳಲ್ಲಿ ನರೇಗಾ ಉದ್ಯೋಗ ಖಾತ್ರಿ ಕಾಮಗಾರಿ ಪ್ರಾರಂಭ ಮಾಡಬೇಕು. ಕಾರಂಜಾ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.
ಸಚಿವರು ದೀಪಾವಳಿ ಹಬ್ಬದ ಒಳಗಾಗಿ ನಮ್ಮ ಸಮಸ್ಯೆಗಳು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಅಲ್ಲಿವರೆಗೆ ನಮ್ಮ ಈ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ. ಒಂದು ವೇಳೆ ಅವರು ನಮ್ಮ ಸಮಸ್ಯೆಗಳು ಬಗೆಹರಿಸದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ರೈತರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಸ್ವಾಮಿ, ಬಾಬುರಾವ್ ಹೊನ್ನಾ, ನಾಗಶೆಟ್ಟೆಪ್ಪ ಲಂಜವಾಡೆ, ಕಾಶೀನಾಥ್ ಭೂರೆ, ನಝೀರ್ ಅಹ್ಮದ್, ಕೊಂಡಿಬಾರಾವ್ ಪಾಂಡ್ರೆ, ಎಂ.ಡಿ ಶಾಫಯತ್ ಅಲಿ, ಸಂತೋಷ್ ಕುಮಾರ್ ಹಾಗೂ ಸೂರ್ಯಕಾಂತ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.