ಬೀದರ್ | ದೇಶದಿಂದ ಮನುವಾದ ಶಾಶ್ವತವಾಗಿ ನಿರ್ನಾಮ ಮಾಡಲು ಸಾಮೂಹಿಕ ಹೋರಾಟದ ಅವಶ್ಯಕತೆ ಇದೆ : ಭಾನುಪ್ರತಾಪ್ ಸಿಂಗ್
ಬೀದರ್ : ಮನುವಾದ ದೇಶದಿಂದ ಶಾಶ್ವತವಾಗಿ ನಿರ್ನಾಮ ಮಾಡಲು ಸಾಮೂಹಿಕ ಹೋರಾಟದ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟ್ ನ ವಕೀಲ ಭಾನುಪ್ರತಾಪ್ ಸಿಂಗ್ ಅವರು ಹೇಳಿದರು.
ಇಂದು ನಗರದ ಡಾ.ಚೆನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಕರ್ನಾಟಕ ಪಂಚಶೀಲ ಸಾಹಿತ್ಯ ಕಲಾ ಸಮಿತಿ ವತಿಯಿಂದ 14ನೇ ಅಕ್ಟೋಬರ್ 1956 ರಂದು ನಾಗಪೂರದಲ್ಲಿ ಜರುಗಿದ ದೀಕ್ಷಾಭೂಮಿ ಕಾರ್ಯಕ್ರಮ ದಿನದ ನಿಮಿತ್ತ ಬೃಹತ್ ಬಹುಜನ ಜಾಗೃತಿ ಸಮಾವೇಶ ಹಾಗೂ ರಾಜ್ಯ ಮಟ್ಟದ ಬುಧ್ದ ಭೀಮ ಗೀತೆಗಳ ಭಜನೆ ಸಂಗೀತ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಮನುವಾದ, ಅಸಮಾನತೆ, ಸಂವಿಧಾನ ವಿರುದ್ಧ ಮತ್ತು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು ಮನುಶಾಸ್ತ್ರ ಒಪ್ಪುವ ಸರ್ಕಾರಗಳಿಂದ ನಡೆಯುತ್ತಿದೆ. ಶಾಂತಿ, ಸಮಾನತೆ, ಬಂಧುತ್ವ ಮರು ನಿರ್ಮಾಣ ಮಾಡಲು ದೇಶದ ಬಹುಜನರು ಡಾ.ಅಂಬೇಡ್ಕರ್ ದಾರಿ ತೋರಿಸಿದ ತಥಾಗತ ಗೌತಮ ಬುದ್ಧರ ಬೌದ್ಧ ಧಮ್ಮ ಸ್ವಿಕರಿಸಿ ಬೌದ್ಧರಾಗುವ ಮೂಲಕ ಪ್ರಬುಧ್ದ ಭಾರತ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದರು.
ಬಹುಜನರು ದೇಶವನ್ನು ಗೌರವಿಸುವ ಸಲುವಾಗಿ ಭಾರತ ಅಥವಾ ಇಂಡಿಯಾ ಎಂದು ಮಾತ್ರ ಹೇಳಬೇಕು. ಹಿಂದುಸ್ತಾನ ಪದ ಬಳಸಬಾರದು. ಸಂವಿಧಾನದಲ್ಲಿಯು ಸಹ ಆ ಪದಕ್ಕೆ ಅವಕಾಶವಿಲ್ಲ ಎಂದು ಹೇಳಿದ ಅವರು, ಡಾ.ಅಂಬೇಡ್ಕರ್ ಅವರು ಸಾಕಷ್ಟು ನೋವು ನಲಿವು ಸಹಿಸುಕೊಂಡು ನಮ್ಮೆಲರಿಗೆ ಸಂವಿಧಾನದ ಮೂಲಕ ಮುಕ್ತಿ ನೀಡಿದ್ದಾರೆ. ಅವರ ಸಂವಿಧಾನ ಸಂಪೂರ್ಣ ಅನುಷ್ಠಾನ ಆಗಬೇಕಾದರೆ ಬಹುಜನರು ರಾಜಕೀಯವಾಗಿ ಮುಂದೆ ಬರಬೇಕು ಎಂದರು.
ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಜೊತೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಟವಾಡುತ್ತಿದೆ. ಇನ್ನು ಮುಂದೆ ಅವರ ಆಟ ನಡೆಯುದಿಲ್ಲ. ಏಕೆಂದರೆ ಬಹುಜನರು ಜಾಗೃತರಾಗುತ್ತಿದ್ದಾರೆ. ಇತ್ತೀಚಿಗೆ ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಧೀಶರಿಗೆ ಮನುವಾದಿ, ದೇಶದ್ರೋಹಿ ವ್ಯಕ್ತಿ ರಾಕೇಶ್ ಕಿಶೋರ್ ಶೂ ಎಸೆದಿದ್ದಾನೆ. ಈತನ ಹಿಂದೆ ಮನುವಾದಿಗಳ ದೊಡ್ಡ ಸಂದೇಶ ಇದೆ. ಇದಕ್ಕೆ ಭಾರತೀಯ ಪ್ರತಿಯೊಬ್ಬ ನಾಗರಿಕರು ವಿರೋಧಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಂತೆ ಜ್ಞಾನ ಸಾಗರ ಅವರು ಸಾನಿಧ್ಯ ವಹಿಸಿದರು.
ಕರ್ನಾಟಕ ಪಂಚಶೀಲ ಸಾಹಿತ್ಯ ಕಲಾ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಕಾಂಚೆ, ಹಿರಿಯ ಮುಖಂಡ ವೈಜಿನಾಥ್ ಸೂರ್ಯವಂಶಿ, ಬಿ.ಕೃಷ್ಣಪ್ಪ, ವಿಶ್ವನಾಥ್ ದಿನೆ, ವಿಜಯಕುಮಾರ್ ಸೋನಾರೆ, ದಯಾನಂದ್ ನೌಲೆ, ಡಾ.ಅಮೃತ್ ಎಸ್.ಮೊಳಕೇರೆ, ರಾಜಕುಮಾರ್ ಮೂಲಭಾರತಿ, ಚಂದ್ರಕಾಂತ್ ನಿರಾಟೆ, ಪ್ರಕಾಶ್ ಠಾಕುರ್, ಮಹೇಶ್ ಗೋರನಾಳಕರ್, ಬಬ್ರವಾನ್ ಬೆಳಮಗಿ, ಸಂಜುಕುಮಾರ್ ಡಾಕುಳಗಿ, ಕಂಟೇಪ್ಪಾ ಪೂಜಾರಿ, ಸುರೇಶ್ ಜೊಜನಾಕರ್, ರಾಜಕುಮಾರ್ ಗೂನಳ್ಳಿ, ಮಲ್ಲಿಕಾರ್ಜುನ್ ಮಹೇಂದ್ರಕುಮಾರ್, ರಾಜಕುಮಾರ್ ಕಾಂಬಳೆ, ನರ್ಸಿಂಗ್ ಸಾಮ್ರಾಟ, ಘಾಳೆಪ್ಪಾ ಮೈಲೂರೆ ಹಾಗೂ ಗೋಪಲರಾವ್ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.