ಬೀದರ್ | ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಕಳ್ಳತನ ಪ್ರಕರಣದ ಆರೋಪಿ ಕಾಲಿಗೆ ಗುಂಡೇಟು
ಬೀದರ್ : ಬಂಧಿಸಲು ತೆರಳಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ನಗರದ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಬಂಧಿತ ಆರೋಪಿಗಳು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ನಿವಾಸಿಗಳಾಗಿದ್ದು, ಕರ್ತಾರಸಿಂಗ್ ಎಂಬ ಆರೋಪಿಯ ಬಲಗಾಲಿಗೆ ಮೂರು ಸುತ್ತಿನ ಫೈರಿಂಗ್ ಮಾಡಲಾಗಿದ್ದು, ಇನ್ನುಳಿದ ಆರೋಪಿಗಳಾದ ಜಗದೀತ್ ಸಿಂಗ್ ಮತ್ತು ಅಕ್ಷಯ್ ಎಂಬವರನ್ನು ಬಂಧಿಸಲಾಗಿದೆ.
ಘಟನೆಯ ವಿವರ : ಎ. 26ರಂದು ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಓಲ್ಡ್ ಆದರ್ಶ ಕಾಲೋನಿಯ ಮನೆ ಒಂದರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ, ಮನೆಯಲ್ಲಿದ್ದ ಸುಮಾರು 280 ಗ್ರಾಂ ಚಿನ್ನವನ್ನು ದರೋಡೆ ಮಾಡಲಾಗಿತ್ತು. ಈ ಘಟನೆ ಕುರಿತಾಗಿ ಗಾಂಧಿ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲು ಪೊಲೀಸರು ತಂಡ ರಚನೆ ಮಾಡಿದ್ದರು. ಮೇ 2 ರ ಮುಂಜಾನೆ ಭಾಲ್ಕಿ ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ನೇತೃತ್ವದಲ್ಲಿ ಆರೋಪಿಗಳ ಶೋಧಕ್ಕಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಹೊನ್ನಿಕೇರಿ ಬಳಿ ಆರೋಪಿಗಳು ಇರುವ ವಿಷಯ ತಿಳಿದು, ಬಂಧಿಸಲು ಹೋದಾಗ ಆರೋಪಿಗಳು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ದರೋಡೆಕೋರರ ಹಲ್ಲೆಯಿಂದ ಗ್ರಾಮೀಣ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮಕ್ಸೂದ್ ಅವರ ಭುಜಕ್ಕೆ ಗಾಯವಾಗಿದೆ. ಇದರಿಂದಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಪೊಲೀಸರು ಆರೋಪಿಯ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಮತ್ತು ಆರೋಪಿಯನ್ನು ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಭೇಟಿ ನೀಡಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 5 ಜನ ಆರೋಪಿಗಳು ಭಾಗಿಯಾಗಿದ್ದು, ಈಗಾಗಲೇ ಮೂವರನ್ನು ಬಂಧಿಸಲಾಗಿದೆ. ಕರ್ತಾರ್ ಸಿಂಗ್ ಎಂಬಾತನ ಮೇಲೆ ದರೋಡೆ, ಕಳ್ಳತನ ಹೀಗೆ ವಿವಿಧ 18 ಪ್ರಕರಣ ದಾಖಲಾಗಿವೆ. ಬಂಧಿತರಿಂದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದು, ಶೋಧಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದ್ದಾರೆ.