ಬೀದರ್ : ಹಳ್ಳಿಖೇಡ್ (ಕೆ) ಗ್ರಾಮದ ಬಳಿ 2.6 ತೀವ್ರತೆಯ ಭೂಕಂಪನ
ಬೀದರ್ : ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ್ (ಕೆ) ಗ್ರಾಮದಿಂದ 2.5 ಕಿ.ಮೀ. ವಾಯುವ್ಯ ದಿಕ್ಕಿನಲ್ಲಿ 8 ಕಿ.ಮೀ. ಆಳದಲ್ಲಿ ಗುರುವಾರ ರಾತ್ರಿ ಸುಮಾರು 9 ಗಂಟೆಗೆ 2.6 ತೀವ್ರತೆಯ ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಈ ಭೂಕಂಪ ಕೇಂದ್ರವು ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ (ಬಿ) ಗ್ರಾಮದಿಂದ 4.3 ಕಿ.ಮೀ ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿದೆ. ಹುಮನಾಬಾದ್ ತಾಲೂಕಿನ ಕಲ್ಲೂರು ಗ್ರಾಮದಿಂದ 5 ಕಿ. ಮೀ ನೈಋತ್ಯ ದಿಕ್ಕಿನಲ್ಲಿದೆ. ಹುಮನಾಬಾದ್ ನಗರದಿಂದ 12 ಕಿ. ಮೀ ನೈಋತ್ಯ ದಿಕ್ಕಿನಲ್ಲಿ ಹಾಗೂ ಕಲಬುರಗಿ ಭೂಕಂಪ ವೀಕ್ಷಣಾಲಯದಿಂದ 53 ಕಿ.ಮೀ ಈಶಾನ್ಯ ದಿಕ್ಕಿನಲ್ಲಿ ಕಂಡು ಬಂದಿದೆ.
ಭೂಕಂಪನ ತೀವ್ರತೆಯ ನಕ್ಷೆಯ ಪ್ರಕಾರ, ಭೂಕಂಪನದ ತೀವ್ರತೆ ಕಡಿಮೆಯಾಗಿದೆ. ಭೂಕಂಪನ ಕೇಂದ್ರದಿಂದ ಗರಿಷ್ಠ 30ರಿಂದ 40 ಕಿ.ಮೀ. ದೂರದವರೆಗೆ ಅನುಭವಿಸಬಹುದು. ಈ ರೀತಿಯ ಭೂಕಂಪನದಿಂದ ಯಾವುದೇ ಹಾನಿ ಉಂಟಾಗುವುದಿಲ್ಲ. ಆದರೂ ಸ್ಥಳೀಯವಾಗಿ ಸ್ವಲ್ಪ ಅಲುಗಾಡುವಿಕೆ ಕಂಡುಬರಬಹುದು ಎನ್ನಲಾಗಿದೆ.
ಭೂಕಂಪನ ವಲಯದಲ್ಲಿ ಭೂಕಂಪನದಿಂದ ಉಂಟಾಗುವ ಹಾನಿಯ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ನಕ್ಷೆಯ ಪ್ರಕಾರ ಭೂಕಂಪನದ ತೀವ್ರತೆ ಕಡಿಮೆ ಮತ್ತು ವಿನಾಶಕಾರಿಯಲ್ಲದ ಕಾರಣ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರವು ಧೃಡಪಡಿಸಿದೆ.