ಬೀದರ್ | ಹಳೆ ಬಸ್ ನಿಲ್ದಾಣದಲ್ಲಿ ತುಂಬಿಕೊಂಡ ಕಸದ ರಾಶಿ : ಪ್ರಯಾಣಿಕರ ಪರದಾಟ
ಬೀದರ್ : ನಗರದ ಹಳೆ ಬಸ್ ನಿಲ್ದಾಣದ ನಿರ್ಗಮನ ದ್ವಾರದ ಸುತ್ತ ಕಸದ ರಾಶಿಯೇ ತುಂಬಿಕೊಂಡಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ಬೀದರ್ ನಗರದ ಹಳೆ ಬಸ್ ನಿಲ್ಧಾಣದಿಂದ ಭಾಲ್ಕಿ, ಚಿಟಗುಪ್ಪ, ಚಿಂಚೋಳಿ, ಚಿಮಕೋಡ ಹಾಗೂ ಚಿಲ್ಲರ್ಗಿ ಸೇರಿದಂತೆ ಅನೇಕ ಹಳ್ಳಿಗಳಿಗೆ ಬಸ್‌ಗಳು ತೆರಳುತ್ತದೆ. ಪ್ರತಿದಿನ ಸಾವಿರಾರು ಜನ ಪ್ರಯಾಣಿಕರು, ವಿದ್ಯಾರ್ಥಿಗಳು ಈ ನಿಲ್ದಾಣದಿಂದ ಪ್ರಯಾಣಿಸುತ್ತಾರೆ.
ಆದರೆ, ಬಸ್ ನಿಲ್ದಾಣದ ನಿರ್ಗಮನ ದ್ವಾರದಲ್ಲಿಯೇ ದೊಡ್ಡದಾದ ಗುಂಡಿಗಳಿವೆ. ಇದರಿಂದ ವಾಹನಗಳು ಓಡಾಟಕ್ಕೆ ಸಮಸ್ಯೆಯಾಗಿದೆ. ಇನ್ನೊಂದೆಡೆ ಬಸ್ ನಿಲ್ದಾಣದ ಸುತ್ತ ಕಸದ ರಾಶಿಯಿಂದ ತುಂಬಿಕೊಂಡಿದೆ. ಬಸ್ ನಿಲ್ದಾಣದ ಒಳಗಡೆ ಕೂಡ ಸ್ವಚ್ಛತೆಗೆ ಆದ್ಯತೆ ನೀಡದೆ ಎಲ್ಲೆಂದರಲ್ಲಿ ಕಸ ಬಿಸಾಡಿರುವುದು ಕಂಡು ಬಂದಿದೆ. ಬಸ್ ನಿಲ್ದಾಣದ ಶೌಚಾಲಯಗಳು ಶುಚಿಗೊಳಿಸದ ಕಾರಣ ಗಬ್ಬೆದ್ದಿವೆ.
ಪ್ರಯಾಣಿಕರಿಗೆ ಒಂದೆಡೆ ಕೆಸರಲ್ಲಿ ಬೀಳುವ ಆತಂಕವಿದ್ದರೆ, ಮತ್ತೊಂದು ಕಡೆ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಈ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿಯೇ ನಗರ ಸಭೆ ಕಾರ್ಯಾಲಯ ಇದೆ. ಆದರೂ ಕೂಡ ಅಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಆದ್ದರಿಂದ ರಸ್ತೆಯಲ್ಲಿನ ಗುಂಡಿ ಮುಚ್ಚಿ ಸ್ವಚ್ಛತೆ ಕಾಪಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.