ಬೀದರ್ | ಒಳಮೀಸಲಾತಿ, ಸದಾಶಿವ ಆಯೋಗ ವರದಿ ಜಾರಿಗೆ ತರಬಾರದು : ವಿಷ್ಣುವರ್ಧನ್ ವಾಲ್ದೊಡ್ಡಿ
ಬೀದರ್ : ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಒಳಮೀಸಲಾತಿ ಹಾಗೂ ಎ.ಜೆ. ಸದಾಶಿವ ಆಯೋಗ ವರದಿ ಜಾರಿಗೆ ತರಬೇಕು ಎಂದು ಹೋರಾಟ ನಡೆಸುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಈ ವರದಿ ಜಾರಿಗೆ ತರಬಾರದು ಎಂದು ಕರ್ನಾಟಕ ಭೀಮ್ ಸೇನೆ ರಾಜ್ಯ ಕಾರ್ಯದರ್ಶಿ ವಿಷ್ಣುವರ್ಧನ್ ವಾಲದೊಡ್ಡಿ ಹೇಳಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೆ ತರುವುದರಿಂದ ಪರಿಶಿಷ್ಟ ಜನಾಂಗದವರ ಮೇಲೆ ಆಗುವ ಪರಿಣಾಮ ಮಾರಕವಾಗಿರುತ್ತದೆ. ಪರಿಶಿಷ್ಟ ಬಡ ಸಮುದಾಯದ ಜನರ ಗಮನಕ್ಕೆ ತರದೆ ಕೆಲ ಮುಖಂಡರು ಅವರ ಸ್ವಾರ್ಥಕ್ಕಾಗಿ ಹೋರಾಟ ಮಾಡಿ, ಬಡವರ ದಾರಿ ತಪ್ಪಿಸುತ್ತಿದ್ದಾರೆ ಎಂದು ಅರೋಪಿಸಿದರು.
ಕಾಂಗ್ರೇಸ್ ಮತ್ತು ಬಿಜೆಪಿ ಸರ್ಕಾರ ಇವರೆಡು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಇವರು ಒಳಮೀಸಲಾತಿ ಎನ್ನುವ ವಿಷಬೀಜ ಬಿತ್ತಿ ಉಪಜಾತಿಗಳಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಹುಜನರನ್ನು ಬಲಹೀನರನ್ನಾಗಿ ಮಾಡುವುದೇ ಇವರ ರಾಜಕೀಯ ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಳಮೀಸಲಾತಿ ಎನ್ನುವುದು ಸಂವಿಧಾನಾತ್ಮಕ ಪದವೇ ಇಲ್ಲ. ಪರಿಶಿಷ್ಟ ಜನಾಂಗದವರಿಗೆ ಒಳಮೀಸಲಾತಿ ಅವಶ್ಯಕತೆ ಇಲ್ಲ. ಎ.ಜೆ. ಸದಾಶಿವ ಆಯೋಗ ವರದಿ ಸಾರ್ವಜನಿಕರಿಗೆ ಮುಟ್ಟಿಸಿ ನಿಜ ಅಂಶ ಏನಿದೆ ಎಂದು ತಿಳಿಸಬೇಕು. ಯಾವುದೇ ಕಾರಣಕ್ಕೂ ಆ ವರದಿ ಜಾರಿಗೆ ತರಬಾರದು ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಅವರು, ಬೀದರ್ ಮತ್ತು ಕಲಬುರಗಿಯಲ್ಲಿರುವ ಎಸ್. ಸಿ ಬಲಗೈ (ಹೊಲೆಯ) ಸಮುದಾಯದ ಜನ ಬಹಳ ಮುಂದುವರೆದಿದ್ದಾರೆ. ಹಾಗಾಗಿ ಅವರನ್ನು ಮೀಸಲಾತಿಯಿಂದಲೇ ಕೈ ಬಿಡಬೇಕು ಎಂದು ಹೇಳುತ್ತಾರೆ. ಇವರು ತಮ್ಮ ರಾಜಕೀಯ ಲಾಭಕ್ಕೋಸ್ಕರ ಬಡ ಜನರ ಕತ್ತು ಹಿಸುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದರು.
ಒಂದು ವೇಳೆ ಒಳಮೀಸಲಾತಿ ಹಾಗೂ ಸದಾಶಿವ ಆಯೋಗ ಜಾರಿಗೆ ತಂದರೆ ಪರಿಶಿಷ್ಟ ಜಾತಿ, ಉಪ ಜಾತಿಗಳ ಎಲ್ಲಾ ಸಮುದಾಯದ ಬೆಂಬಲದೊಂದಿಗೆ ಕರ್ನಾಟಕ ಭೀಮ್ ಸೇನೆಯ ರಾಜ್ಯಾದ್ಯಂತ ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕನ್ನಡಿಗರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶ್ರೀಕಾಂತ್ ಭವಾನಿ, ಭೀಮ ಆರ್ಮಿ ಜಿಲ್ಲಾ ಉಪಾಧ್ಯಕ್ಷ ಗೌತಮ್ ಬಗದಲಕರ್, ಕರ್ನಾಟಕ ಭೀಮ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಾಜೋದ್ದಿನ್, ದಿಗಂಬರ್ ಪುಂಗೆ ಹಾಗೂ ನಿರಂಕಾರ್ ಕುಂಚೆ ಸೇರಿದಂತೆ ಇತರರು ಭಾಗವಹಿಸಿದ್ದರು.