×
Ad

ಬೀದರ್ | ಕನ್ನಡದ ಬಳಕೆಯಿಂದ ಕನ್ನಡ ಉಳಿಯುತ್ತದೆ : ಡಾ.ಬಸವಲಿಂಗ ಪಟ್ಟದೇವರು

Update: 2025-11-03 18:29 IST

ಬೀದರ್ : ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ನಾವು ಬೇರೆ ಭಾಷೆ ಗೌರವಿಸಬೇಕು. ಆದರೆ ನಮಗೆ ಕನ್ನಡದ ಬಗ್ಗೆ ಅಭಿಮಾನ ಇರಬೇಕು. ನಾವು ನಮ್ಮ ಮನೆಯಲ್ಲಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು. ಭಾಷೆ ಬಳಕೆಯಿಂದಲೇ ಅದು ಜೀವಂತವಾಗಿ ಉಳಿಯುತ್ತದೆ ಎಂಬುದು ಕನ್ನಡಿಗರು ಮರೆಯಬಾರದು ಎಂದು ನಾಡೋಜ ಡಾ.ಬಸವಲಿಂಗ ಪಟ್ಟದೇವರು ಹೇಳಿದರು.

ಭಾಲ್ಕಿ ಪಟ್ಟಣದಲ್ಲಿ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಧಾತ್ರಿ ರಂಗಸಂಸ್ಥೆ ಸಿರಿಗೆರೆ ಕಲಾವಿದರಿಂದ ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಕನ್ನಡದಲ್ಲಿ ಶ್ರೇಷ್ಠವಾದಂತಹ ಸಾಹಿತ್ಯ ಪರಂಪರೆ ಇದೆ. ಅದರಲ್ಲಿ 12ನೇ ಶತಮಾನದ ಶರಣರ ವಚನ ಸಾಹಿತ್ಯ ವಿಶೇಷವಾದದ್ದು. ಶರಣರು ದೇವರಿಗೆ ಕನ್ನಡ ಕಲಿಸಿದ ಕನ್ನಡಾಭಿಮಾನಿಗಳು. ಕನ್ನಡದಲ್ಲಿ ಹುಟ್ಟಿದ ವಚನ ಸಾಹಿತ್ಯ ಇವತ್ತು ಜಗತ್ತಿಗೆ ದಾರಿದೀಪವಾಗಿದೆ. ಅದಕ್ಕಾಗಿ ದೇಶದ ಅನೇಕ ಭಾಷೆಗಳಲ್ಲಿ ವಚನಗಳ ಅನುವಾದ ನಡೆಯುತ್ತಿದೆ. ಕನ್ನಡ ನಮ್ಮ ಅಸ್ಮಿತೆ ಹಾಗೂ ಅಸ್ತಿತ್ವದ ಪ್ರತೀಕವಾಗಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರದ್ದಾಗಿದೆ ಎಂದು ನುಡಿದರು.

ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದ ಸಂಸದ ಸಾಗರ್ ಖಂಡ್ರೆ, ಕನ್ನಡ ಭಾಷೆ ನಮ್ಮೆಲ್ಲರ ಮಾತೃ ಭಾಷೆ. ಕರ್ನಾಟಕದಲ್ಲಿರುವ ಎಲ್ಲರಿಗೂ ಕನ್ನಡ ಬರಲೇಬೇಕು. ಅನ್ಯ ರಾಜ್ಯದ ಜನರಿಗೆ, ಅನ್ಯ ಭಾಷಿಕರಿಗೆ ನಾವು ಕನ್ನಡದ ಅರಿವು ಮೂಡಿಸಬೇಕು. ಕರ್ನಾಟಕ ಏಕೀಕರಣಕ್ಕಾಗಿ ಡಾ.ಚನ್ನಬಸವ ಪಟ್ಟದೇವರು ಹಾಗೂ ಲೋಕನಾಯಕ ಭೀಮಣ್ಣ ಖಂಡ್ರೆ ಮತ್ತು ಅನೇಕ ಕನ್ನಡಾಭಿಮಾನಿಗಳು ಹೋರಾಟ ಮಾಡಿದರು. ಭಾಲ್ಕಿಯ ಮಠ ಕನ್ನಡದ ಮಠ, ಕನ್ನಡದ ಪಟ್ಟದೇವರು ಎಂದೇ ಖ್ಯಾತಿಯಾಗಿದೆ. ನಾಡೋಜ ಡಾ.ಬಸವಲಿಂಗ ಪಟ್ಟದೇವರು ಚನ್ನಬಸವೇಶ್ವರ ಗುರುಕುಲದ ಮೂಲಕ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಭೂಷಣ ಮಾಮಡಿ ಅವರು ಅಧ್ಯಕ್ಷತೆ ವಹಿಸಿ ಕನ್ನಡ ಮತ್ತು ಕರ್ನಾಟಕ ರಾಜ್ಯೋತ್ಸವ ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು. ಮಲ್ಲಮ್ಮ ಆರ್. ಪಾಟೀಲ್ ಅವರಿಗೆ ಸೇವಾ ನಿವೃತಿ ನಿಮಿತ್ತ ವಿಶೇಷ ಸನ್ಮಾನ ಮಾಡಲಾಯಿತು. ಕೊನೆಯಲ್ಲಿ ಧಾತ್ರಿ ರಂಗ ಕಲಾವಿದರಿಂದ ಸಂಸಾರದಲ್ಲಿ ಸನಿದಪ ಹಾಸ್ಯ ನಾಟಕ ಪ್ರದರ್ಶನಗೊಂಡಿತು.

ಈ ಸಂದರ್ಭದಲ್ಲಿ ಗುರುಬಸವ ಪಟ್ಟದೇವರು, ಜೈರಾಜ್ ಕೊಳ್ಳಾ, ಕೆ.ಡಿ.ಗಣೇಶ್, ಸಂತೋಷ್ ಬಿ.ಜಿ.ಪಾಟೀಲ್, ಸಂಗಮೇಶ್ ಗುಮ್ಮೆ, ಗಣೇಶ್ ಪಾಟೀಲ್, ಸಂಜುಕುಮಾರ್ ನಾವದಗಿ, ಗೊರಕ್ ಶ್ರೀಮಾಳೆ, ಚಂದು ಸಂಪಗೆ, ಸುನೀತಾ ಮಮ್ಮಾ, ಸಿದ್ರಾಮಯ್ಯ ಸ್ವಾಮಿ, ಬಸವರಾಜ್ ಕಾರಬಾರಿ, ರಾಹುಲ್ ಸಿಂಧೆ ಹಾಗೂ ವಿನಾಯಕ್ ಬಿರಾದಾರ್ ಸೇರಿದಂತೆ ಮುಂತಾದ ಕನ್ನಡ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News