ಬೀದರ್ |ಸಿಜೆಐ ಗವಾಯಿ ಮೇಲೆ ಶೂ ಎಸೆದ ವಕೀಲನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಾದಿಗ ನೌಕರರ ಸಂಘದಿಂದ ಮನವಿ ಸಲ್ಲಿಕೆ
ಬೀದರ್ : ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ದಾಳಿ ಪ್ರಯತ್ನ ಖಂಡಿಸಿ ಕರ್ನಾಟಕ ರಾಜ್ಯ ಮಾದಿಗ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾದ ಮನವಿ ಪತ್ರದಲ್ಲಿ, ವಕೀಲ ರಾಕೇಶ್ ಕಿಶೋರ್ ಅವರಿಂದ ನಡೆದಿರುವ ಈ ಕೃತ್ಯವು ಕೇವಲ ವ್ಯಕ್ತಿಗತ ದಾಳಿ ಅಲ್ಲ, ಅದು ನ್ಯಾಯಾಂಗದ ಸ್ವಾಯತ್ತತೆ ಮತ್ತು ದೇಶದ ಪ್ರಜಾಪ್ರಭುತ್ವದ ಮೂಲ ಸಿದ್ಧಾಂತಗಳ ಮೇಲಿನ ನೇರ ದಾಳಿಯಾಗಿದೆ. ಗೃಹ ವ್ಯವಹಾರಗಳ ಸಚಿವಾಲಯದ ಮೂಲಕ ಈ ಘಟನೆಯ ಕುರಿತು ಸಂಪೂರ್ಣ, ಪಾರದರ್ಶಕ ತನಿಖೆ ನಡೆಸಲು ನಿರ್ದೇಶಿಸಬೇಕು. ನ್ಯಾಯಾಂಗದ ಗೌರವ, ಸ್ವಾಯತ್ತತೆ ಹಾಗೂ ಭದ್ರತೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆರೋಪಿಯಾದ ರಾಕೇಶ್ ಕಿಶೋರ್ ಹಾಗೂ ನ್ಯಾಯಾಂಗವನ್ನು ಅವಮಾನಗೊಳಿಸಲು ಅಥವಾ ಬೆದರಿಸಲು ಯತ್ನಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ನ್ಯಾಯಾಂಗದಲ್ಲಿ ರಾಜಕೀಕರಣ ಅಥವಾ ಭಯದ ವಾತಾವರಣ ನಿರ್ಮಾಣವಾಗದಂತೆ ಕಾನೂನುಬದ್ಧ ಹಾಗೂ ಸಂಸ್ಥಾತ್ಮಕ ರಕ್ಷಣಾ ಕ್ರಮಗಳನ್ನು ಬಲಪಡಿಸಬೇಕು. ನ್ಯಾಯಾಂಗವು ಸಂವಿಧಾನದ ಮತ್ತು ನಾಗರಿಕರ ಹಕ್ಕುಗಳ ಅಂತಿಮ ರಕ್ಷಕವಾಗಿದೆ. ಅದರ ಪವಿತ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ. ದೇವಿದಾಸ್ ತುಮಕುಂಟೆ, ಸಲಹೆಗಾರ ಎಂ.ಎಸ್. ಮನೋಹರ್, ಸುಮಂತ್ ಕಟ್ಟಿಮಣಿ, ಬಸವರಾಜ್ ಮಾಳಗೆ, ತುಳಸಿರಾಮ್ ಹಾಗೂ ಸಮೃತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.